ರಾಷ್ಟ್ರ, ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಲು ಕರೆ


ಸಂಜೆವಾಣಿ ವಾರ್ತೆ
ಹೊಸಪೇಟೆ: ಡಿ9: ಪದವಿ ಪೂರ್ವ ವಿದ್ಯಾರ್ಥಿಗಳು ಬಾಲ್ ಬ್ಯಾಡ್ಮಿಂಟನ್ ಪಂದ್ಯಗಳಲ್ಲಿ ಹೆಚ್ಚಿನ ಸಾಧನೆ ಮಾಡಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ತಮ್ಮ ಕಾಲೇಜಿನ ಹಾಗೂ ಪದವಿ ಪೂರ್ವ ಇಲಾಖೆಗೆ ಹೆಸರನ್ನು ತರಬೇಕೆಂದು ಬಳ್ಳಾರಿ-ವಿಜಯನಗರ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಫಾಲಾಕ್ಷ.ಟಿ. ವಿದ್ಯಾರ್ಥಿಗಳಿಗೆ ಕರೆ  ನೀಡಿದರು.
ಅವರು ಸ್ಥಳೀಯ ವಿಜ್ಞಾನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಬಾಲ್ ಬ್ಯಾಡ್‌ಮಿಂಟನ್ ಪಂದ್ಯಾವಳಿಗಳ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಒಬ್ಬ ವ್ಯಕ್ತಿಯ ಜೀವನದಲ್ಲಿ ಸರ್ವತೋಮುಖ ಸಾಧನೆ ಮಾಡಲು ಕೇವಲ ಶಿಕ್ಷಣದಲ್ಲಿ ಮಾತ್ರ ಸಾಧನೆ ಮಾಡಿದರೆ ಸಾಲದು ಕ್ರೀಡೆಗಳು ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಹ ಸಕ್ರಿಯವಾಗಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ತಿಳಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಚಿತ್ತವಾಡ್ಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಹಾಗೂ ವಿಜಯನಗರ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯ ಸಂಘದ ಅಧ್ಯಕ್ಷ ನಾಗರಾಜ್ ಹವಲ್ದಾರ್ ಮಾತನಾಡಿ, ಪದವಿ ಪೂರ್ವ ಕಾಲೇಜುಗಳ ವಿವಿಧ ಕ್ರೀಡಾಕೂಟಗಳನ್ನು ವಿವಿಧ ಜಿಲ್ಲೆಗಳಿಗೆ ಹಂಚಿಕೆ ಮಾಡುತ್ತಾರೆ. ಅದರಂತೆ ನೂತನ ವಿಜಯನಗರ ಜಿಲ್ಲೆಗೆ ರಾಜ್ಯಮಟ್ಟದ ಬಾಲ್ ಬ್ಯಾಡ್‌ಮಿಂಟನ್ ಪಂದ್ಯಾವಳಿಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಹೊಸ ಜಿಲ್ಲೆ ಹಾಗೂ ಹೊಸ ಅನುಭವವಾದರೂ ಸಹ ವಿಜ್ಞಾನ್ ಕಾಲೇಜಿನ ಪ್ರಾಚಾರ್ಯ ವಿದ್ಯಾಧರ ಹಾಗೂ ಅವರ ತಂಡ ಈ ಪಂದ್ಯಾವಳಿಗಳ ಆತಿಥ್ಯದ ಹೊಣೆಯನ್ನು ಹೊತ್ತಿರುವುದು ನಮ್ಮ ಇಲಾಖೆಗೆ ಹೆಮ್ಮೆ ತಂದಿದೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಪ್ರಾಚಾರ್ಯ ಗಿರೀಶ್.ಎಂ.ಟಿ. ಇವರು ಮಾತನಾಡಿ ವಿದ್ಯಾರ್ಥಿಗಳೆಲ್ಲಾ ಕ್ರೀಡಾ ಮನೋಭಾವದಿಂದ ಆಟವಾಡಬೇಕು. ಸೋಲು ಗೆಲುವು ಮುಖ್ಯವಲ್ಲ, ಬದಲಾಗಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿಧ್ಯಾಧರ.ಜಿ ಮಾತನಾಡಿ ರಾಜ್ಯಮಟ್ಟದ ಸ್ಪರ್ಧೆಗಳನ್ನು ನಡೆಸಲು ನಮ್ಮ ಕಾಲೇಜಿಗೆ ಅವಕಾಶ ಕೊಟ್ಟಿದ್ದಕ್ಕೆ ಇಲಾಖೆಗೆ ಧನ್ಯವಾದಗಳನ್ನು ಸಲ್ಲಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಕೈಗೊಳ್ಳುವ ಯಾವುದೇ ಕಾರ್ಯಕ್ರಮಗಳಿಗೆ ತಮ್ಮ ಬೆಂಬಲ ಸದಾ ಇರುತ್ತದೆ ಎಂದು ತಿಳಿಸಿದರು.
ವಿಜ್ಞಾನ ಶಾಲೆಯ ಶಿಕ್ಷಕಿ ಶ್ರೀಮತಿ. ಪೂಜಾ ಹಾಗೂ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಉಪನ್ಯಾಸಕ ಡಾ.ದಯಾನಂದ ಕಿನ್ನಾಳ್ ಸ್ವಾಗತ ಕೋರಿದರು, ಪ್ರಾಚಾರ್ಯರ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ವಂದನೆ ಸಲ್ಲಿಸಿದರು. ಜಗದೀಶ್ ಚಂದ್ರ ಬೋಸ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು, ಅಂಪೈರುಗಳು, ಕ್ರೀಡಾತಂಡಗಳ ಮುಖ್ಯಸ್ಥರು, ವಿವಿಧ ಜಿಲ್ಲೆಗಳಿಂದ ಬಂದ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಉಪಸ್ಥಿತರಿದ್ದರು.