ರಾಷ್ಟ್ರೀಯ ಹೆದ್ದಾರಿ ೧೬೭ ರಸ್ತೆ ದುಸ್ಥಿತಿ – ಎದ್ದು ಬಿದ್ದು ಸಂಚರಿಸಿದ ಜನ

ರಾಯಚೂರು.ಸೆ.೦೮- ರಾಷ್ಟ್ರೀಯ ಹೆದ್ದಾರಿ ೧೬೭ ರಲ್ಲಿ ಜನ ಎದ್ದು, ಬಿದ್ದು ನಡೆಯಬೇಕು ಎನ್ನುವ ಪರಿಸ್ಥಿತಿ ನಗರದಲ್ಲಿ ಕಾಣಬಹುದಾಗಿದೆ. ರಾಯಚೂರಿನ ಪ್ರವೇಶದ ಎರಡು ದಿಕ್ಕುಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ದುರ್ಗತಿ ಜನರ ಪಾಲಿಗೆ ಶಾಪವಾಗಿದೆ.
ಹತ್ತಿ ಮಾರುಕಟ್ಟೆ ಬಳಿಯಿರುವ ರೈಲ್ವೆ ಬ್ರಿಡ್ಜ್ ಕೆಳ ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಭಾರೀ ಪ್ರಮಾಣದ ಗುಂಡಿ ಬಿದ್ದಿದೆ. ನಿನ್ನೆ ಸುರಿದ ಭಾರೀ ಮಳೆಯಿಂದ ಸೇತುವೆ ಕೆಳ ಭಾಗದಲ್ಲಿ ನೀರು ಸಂಗ್ರಹದ ಮಧ್ಯೆ ಸಂಚರಿಸುವ ಜನರು ಗುಂಡಿಯಲ್ಲಿ ಬಿದ್ದು, ಎದ್ದು ತೆರಳಿದರು. ರಸ್ತೆಯಲ್ಲಿ ಗುಂಡಿ ಇರುವ ಮಾಹಿತಿಯಿಲ್ಲದೆ ಸಂಚರಿಸಿದ ದ್ವಿಚಕ್ರ ವಾಹನ ಪ್ರಯಾಣಿಕರು ಮಳೆ ನೀರಿನಲ್ಲಿ ಬಿದ್ದು ಮೈ ಒದ್ದೆ ಮಾಡಿಕೊಂಡು ಮನೆ ಸೇರಬೇಕಾಯಿತು. ನಗರ ಪ್ರವೇಶದ ಆರಂಭದಲ್ಲಿಯೆ ರಾಷ್ಟ್ರೀಯ ಹೆದ್ದಾರಿ ೧೬೭ ರ ಗತಿ ಒಳ ಭಾಗದ ರಸ್ತೆಗಳ ದುಸ್ಥಿತಿಗೆ ನಿದರ್ಶನವಾಗಿತ್ತು.
ಆರ್‌ಟಿಓ ವೃತ್ತದ ಬಳಿ ಇದೇ ರೀತಿಯಲ್ಲಿ ರಸ್ತೆ ಅಸ್ತವ್ಯಸ್ತವಾಗಿರುವುದು ಜನರಿಗೆ ನಿತ್ಯ ನರಕವಾಗಿದೆ. ರಾಷ್ಟ್ರೀಯ ಹೆದ್ದಾರಿಯ ಪರಿಸ್ಥಿತಿ ಇದಾದರೆ ಸಾಮಾನ್ಯ ಪರಿಸ್ಥಿತಿಯ ಗತಿಯೇನು ಎನ್ನುವುದು ಊಹಿಸಲು ಅಸಾಧ್ಯವಾಗಿದೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ನೀರು ನಿಂತು ಯಾವುದು ಗುಂಡಿ, ಯಾವುದು ರಸ್ತೆ ಎಂದು ತಿಳಿಯದ ಅಯೋಮಯ ಸ್ಥಿತಿಯಲ್ಲಿ ಜನರು ಓಡಾಡುವ ಅಪರೂಪ ನಗರದಲ್ಲಿ ಸಾಮಾನ್ಯವಾಗಿದೆ.
ರೈಲ್ವೆ ಬ್ರಿಡ್ಜ್ ಕೆಳ ಭಾಗದಲ್ಲಿ ನೀರಿನ ವಿಡಿಯೋಗಳು ವೈರಲ್ ಆದ ನಂತರ ಮತ್ತು ವಿರೋಧ ಪಕ್ಷದ ನಾಯಕರು ಈ ಸ್ಥಳಕ್ಕೆ ಭೇಟಿ ನೀಡಿದ ನಂತರ ನಗರಸಭೆ ಅಧಿಕಾರಿಗಳು ಬಂದು ನೀರು ತೆರವುಗೊಳಿಸಿದರು. ನಗರಸಭೆ ಸದಸ್ಯರಾದ ಸಣ್ಣ ನರಸರೆಡ್ಡಿ ಇವರು ರೈಲ್ವೆ ಬ್ರಿಡ್ಜ್ ರಸ್ತೆ ದುಸ್ಥಿತಿ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದರು.