ರಾಷ್ಟ್ರೀಯ ಹೆದ್ದಾರಿ ೧೬೭ : ನಗರಸಭೆ ಸದಸ್ಯರಿಂದ ತಾತ್ಕಾಲಿಕ ದುರಸ್ತಿ

ರಾಯಚೂರು.ಸೆ.೦೯- ನಗರದ ಹತ್ತಿ ಮಾರುಕಟ್ಟೆ ಬಳಿಯಿರುವ ರೈಲ್ವೆ ಬಳಿಯಿರುವ ರೈಲ್ವೆ ಬ್ರಿಡ್ಜ್ ಕೆಳ ಭಾಗದ ರಾಷ್ಟ್ರೀಯ ಹೆದ್ದಾರಿ ೧೬೭ ರ ಹದಗೆಟ್ಟ ರಸ್ತೆಯನ್ನು ೨೪ ಘಂಟೆಯಲ್ಲಿ ನಗರಸಭೆ ಸದಸ್ಯ ಸಣ್ಣ ನರಸರೆಡ್ಡಿ ಅವರು ಸ್ವಂತ ಖರ್ಚಿನಲ್ಲಿ ತಾತ್ಕಾಲಿಕ ದುರಸ್ತಿ ಮಾಡುವ ಮೂಲಕ ಈ ರಸ್ತೆ ಸಂಚಾರಿಗಳಿಗೆ ನೆರವಾಗಿದ್ದಾರೆ.
ನಿನ್ನೆ ಭಾರೀ ಪ್ರಮಾಣದ ನೀರು ಸಂಗ್ರಹಗೊಂಡು ಅನೇಕರು ರಸ್ತೆಯ ಕುಣಿಯಲ್ಲಿ ಎದ್ದು ಬಿದ್ದು ಸಂಚರಿಸಿದ ವಿಡಿಯೋ ವೈರಲ್ ಆಗಿತ್ತು. ರಾಷ್ಟ್ರೀಯ ಹೆದ್ದಾರಿ ಈ ರಸ್ತೆ ನಿರ್ವಹಿಸಬೇಕಾಗಿತ್ತು. ಕೇಂದ್ರ, ರಾಜ್ಯ ಮತ್ತು ಸ್ಥಳೀಯ ನಗರಸಭೆ ತ್ರಿಬಲ್ ಇಂಜಿನ್ ಬಿಜೆಪಿ ಆಡಳಿತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ರಸ್ತೆಗಳು ಹದಗೆಟ್ಟು ಜನ ಗುಂಡಿಗಳಲ್ಲಿ ಓಡಾಡುವುದು ಸಾಮಾನ್ಯವಾಗಿತ್ತು.
ಆದರೆ, ರಾಜ್ಯ ಹೆದ್ದಾರಿಯ ದುಸ್ಥಿತಿ ಗಮಿಸಿದ ವಾರ್ಡ್ ೩೩ ರ ನಗರಸಭೆ ಸದಸ್ಯರಾದ ಸಣ್ಣ ನರಸರೆಡ್ಡಿ ಅವರು ತಕ್ಷಣವೇ ವೆಟ್ಮಿಕ್ಸ್ ಮತ್ತು ಮರಂ ಹಾಕುವ ಮೂಲಕ ಈ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದಾರೆ. ಈ ಬಗ್ಗೆ ಅವರು ಪತ್ರಿಕೆಗಳಿಗೆ ಮಾಹಿತಿ ನೀಡಿ, ಜನರ ಓಡಾಟ ತೀವ್ರ ಕಷ್ಟದಾಯಕವಾಗಿದ್ದರಿಂದ ನಾನೇ ಸ್ವಂತ ಖರ್ಚಿನಲ್ಲಿ ಕಂಕರ್, ಮರಂ ಹಾಕುವ ಮೂಲಕ ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿ ಮಾಡಿದ್ದೇನೆ. ನೀರಿನ ತೆರವಿಗೆ ನಗರಸಭೆ ಒಂದು ವಾಹನ ಹಾಗೂ ಒಂದು ಜೆಸಿಬಿ ಬಳಸಿರುವುದು ಬಿಟ್ಟರೆ, ಉಳಿದಂತೆ ಎಲ್ಲಾ ಸಾಮಾಗ್ರಿ ಖರೀದಿಗೆ ನಾನೇ ವೆಚ್ಚ ಮಾಡಿರುವುದಾಗಿ ತಿಳಿಸಿದರು.
ಕಾಮಗಾರಿ ಸ್ಥಳಕ್ಕೆ ನಗರಸಭೆ ಅಧ್ಯಕ್ಷರಾದ ಲಲಿತಾ ಕಡಗೋಳ ಆಂಜಿನೇಯ್ಯ ಅವರು ಭೇಟಿ ನೀಡಿ ಪರಿಶೀಲಿಸಿದರು.