ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ

ಚಿತ್ರದುರ್ಗ.ಜೂ.೪; ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಮಂಜೂರಾದ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಹಾಗೂ ಸಂಸದ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ  4 ಪ್ರಮುಖ ರಸ್ತೆಗಳ ನಿರ್ಮಾಣ ಹಾಗೂ ಸಿ.ಎನ್.ಜಿ ಗ್ಯಾಸ್ ಪೈಪ್‍ಲೈನ್ ಅಳವಡಿಕೆ ಕುರಿತು ಸಂಬಂಧಪಟ್ಟ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಮಂಜೂರಾದ 4 ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದೆ. ಹೆದ್ದಾರಿ ನಿರ್ಮಾಣದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಜೊತೆಗೆ ಈಗಾಗಲೇ ಗುರುತಿಸಲಾಗಿರುವ ಅಪಘಾತ ವಲಯಗಳಲ್ಲಿ, ಅಪಘಾತಗಳ ತಡೆಗೆ ಸಿಗ್ನಲ್ ಅಳವಡಿಕೆ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಶಿವಮೊಗ್ಗ ಮತ್ತು ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದೆ. ಮುರುಘಾ ಮಠದ ಜಂಕ್ಷನ್ ಬಳಿಯಲ್ಲಿ ಅಪಘಾತ ವಲಯ ಗುರುತಿಸಲಾಗಿದ್ದು, ಹಾಗಾಗಿ ಪ್ರತ್ಯೇಕ ವಿಸ್ತøತ ಯೋಜನಾ ವರದಿ ತಯಾರಿಸಬೇಕು ಎಂದು ತಾಕೀತು ಮಾಡಿದರು.ಹಿರಿಯೂರು ಮತ್ತು ಹುಳಿಯಾರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹುಲುವಿನಕಟ್ಟೆ ಗ್ರಾಮದ ಸಹ ಸರ್ಕಾರಿ ಶಾಲೆ ಹಾಗೂ ಗ್ರಾಮಸ್ಥರ ಆಕ್ಷೇಪ ಸೇರಿದಂತೆ ಕೆಲವು ಸಮಸ್ಯೆಗಳಿಂದ ಮಂದಗತಿಯಲ್ಲಿ ಸಾಗುತ್ತಿದೆ. ಈ ರಸ್ತೆ ನಿರ್ಮಾಣದ ಕಾಮಗಾರಿಯ ಎಲ್ಲ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಬಳಿ ಚರ್ಚಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.ಹೊಸದುರ್ಗ ಮತ್ತು ಹೊಳಲ್ಕೆರೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿಯು ಕೇವಲ ಪಟ್ಟಣ ವ್ಯಾಪ್ತಿಯಲ್ಲಿ ಮಾತ್ರ ಕಾಮಗಾರಿ ಪ್ರಾರಂಭವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಸಹ ಕಾಮಗಾರಿ ಆರಂಭವಾಗಿಲ್ಲ. ಹಾಗಾಗಿ ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಂಡು ಆರು ತಿಂಗಳೊಳಗೆ ಕಾಮಗಾರಿ ಮುಕ್ತಾಯಗೊಳಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.