ರಾಷ್ಟ್ರೀಯ ಹೆದ್ದಾರಿಮೇಲಿನ ದೊಡ್ಡದಾದ ಗುಂಡಿ ಮುಚ್ಚಿಸಿದ ಹೈವೆ ಪೆಟ್ರೋಲಿಂಗ್

ಶಹಾಬಾದ: ಸೆ.12:ರಾಷ್ಟ್ರೀಯ ಹೆದ್ದಾರಿ 150 ದೇವನತೆಗನೂರ ಸಮೀಪದಲ್ಲಿ ರಸ್ತೆಯ ಮೇಲೆ ದೊಡ್ಡದಾದ ಗುಂಡಿಯಲ್ಲಿ ಸಾಗುತ್ತಿರುವ ವಾಹನಗಳ ಅಪಘಾತಗಳಾಗುವ ಸಾಧ್ಯತೆಯಿರುವುದನ್ನು ಕಂಡು ಶಹಾಬಾದ ಉಪವಿಭಾಗದ ಹೈವೆ ಪೆಟ್ರೋಲಿಂಗ್ ಎಎಸ್‍ಐ ಅಶೋಕ ಕಟ್ಟಿ ಹಾಗೂಸಿಬ್ಬಂದಿ ವಿಠ್ಠಲ್ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಿ ರಸ್ತೆ ದುರಸ್ತಿ ಮಾಡಿಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಕಳೆದ ಎರಡು ತಿಂಗಳಿನಿಂದ ದೇವನತೆಗನೂರಿನ ಹಳ್ಳದ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ದೊಡ್ಡದಾದ ಗುಂಡಿ ಬಿದ್ದಿದೆ.ಇದರಿಂದ ಈಗಾಗಲೇ ಈ ಹಿಂದೆ ಕೆಲವು ಅಪಘಾತಗಳಾಗಿ ನಾಲ್ಕಾರು ಜನ ಸಾವನಪ್ಪಿದ್ದಾರೆ.ಆಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಿದ್ದರು.ಆದರೆ ಮತ್ತೆ ಮೇಲಿನ ಎಲ್ಲ ಪದರು ಕಿತ್ತಿ ಕಂಕರ್‍ಗಳು ಮೇಲೆದ್ದು ದೊಡ್ಡದಾದ ಗುಂಡಿ ಬಿದ್ದಿದೆ.ಈ ಬಗ್ಗೆ ಅನೇಕ ಬಾರಿ ತಿಳಿಸಿದರೂ ಯಾರು ಈ ಕಡೆ ಗಮನಹರಿಸಿರುವುದಿಲ್ಲ.ಆದರೆ ರವಿವಾರ ಪೆಟ್ರೋಲಿಂಗ್ ಎಎಸ್‍ಐ ಅಶೋಕ ಕಟ್ಟಿ ಹಾಗೂಸಿಬ್ಬಂದಿ ವಿಠ್ಠಲ್ ಹೋಗುವಾಗ ಲಾರಿ, ಕಾರು ಹಾಗೂ ಬೈಕ್ ಸವಾರರಿಗೆ ರಸ್ತೆಯಲ್ಲಿ ನೀರು ನಿಂತುಕೊಂಡಿರಬಹುದೆಂದು ಹಾಗೇ ವಾಹನ ಚಲಾಯಿಸಿದ್ದರಿಂದ ಗುಂಡಿಯಲ್ಲಿ ಟೈರ್ ಸಿಗಿಬಿದ್ದು ಆಯಾ ತಪ್ಪಿ ಅಪಘಾತವಾಗುವುದು ಅದೃಷ್ಟವಶ ತಪ್ಪಿದನ್ನು ಕಂಡಿದ್ದಾರೆ.ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಗುರುರಾಜ ಜೋಷಿ ಅವರನ್ನು ಸಂಪರ್ಕಿಸಿದ್ದಾರೆ.ದೊಡ್ಡದಾದ ಗುಂಡಿ ಬಿದ್ದಿದೆ.ಗುಂಡಿಯಲ್ಲಿ ನೀರು ತುಂಬಿಕೊಂಡಿದ್ದರಿಂದ ಗುಂಡಿ ಕಾಣದೇ ಅಪಘಾತಕ್ಕೊಳಗಾಗುತ್ತಾರೆ.ಕೂಡಲೇ ದುರಸ್ತಿಗೊಳಿಸಿ ಎಂದು ಮನವಿ ಮಾಡಿದ್ದಾರೆ. ತಕ್ಷಣವೇ ಸ್ಪಂದಿಸಿದ ಎಇಇ ಗುರುರಾಜ ಜೋಷಿ ಅರ್ಧ ಗಂಟೆಯಲ್ಲಿಯೇ ಸಿಬ್ಬಂದಿಗಳಿಗೆ ಕಳಿಸಿ ದುರಸಿಗೊಳಿಸಿ ಗುಂಡಿಯನ್ನು ಮುಚ್ಚುವಂತ ಕೆಲಸ ಮಾಡಿದ್ದಾರೆ.ಇದರಿಂದ ಸಾರ್ವಜನಿಕರ ಅಪಘಾತಗಳನ್ನು ತಡೆಗಟ್ಟುವಲ್ಲಿ ಹೈವೆ ಪೆಟ್ರೋಲಿಂಗ್‍ನ ಸಿಬ್ಬಂದಿಯವರು ಉತ್ತಮ ಕೆಲಸ ಮಾಡಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.