
ಕೋಲಾರ,ಆ,೧೩- ಪ್ರತಿಯೊಂದು ಶಾಲೆ, ಸರಕಾರಿ ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಕೃತ ಧ್ವಜ ಸಂಹಿತೆ ಮಾದರಿಯಲ್ಲಿಯೇ ರಾಷ್ಟ್ರಧ್ವಜಾರೋಹಣ ನೆರವೇರಬೇಕೆಂದು ಭಾರತ ಸೇವಾದಳ ಜಿಲ್ಲಾ ಗೌರವಾಧ್ಯಕ್ಷ ಸಿಎಂಆರ್ ಶ್ರೀನಾಥ್ ಹೇಳಿದರು.
ತಾಲೂಕಿನ ಅರಾಭಿಕೊತ್ತನೂರು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಿಗೆ ಭಾರತ ಸೇವಾದಳ ಪ್ರಕಟಿಸಿರುವ ಅಧಿಕೃತ ರಾಷ್ಟ್ರಧ್ವಜ ಸಂಹಿತೆ-೨೦೦೨ ರ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರಧ್ವಜ ಆರೋಹಣ ಮಾಡುವ ಪ್ರತಿ ಸಂಸ್ಥೆಗೂ ರಾಷ್ಟ್ರಧ್ವಜ ಸಂಹಿತೆ ಪರಿಚಯವಾಗಬೇಕು ಎಂಬ ಕಾರಣದಿಂದ ಕಳೆದ ವರ್ಷ ಸ್ವಾತಂತ್ಸ್ರೋತ್ಸವ ಅಮೃತ ಮಹೋತ್ಸವ ಸಂದರ್ಭದಲ್ಲಿ ಭಾರತ ಸೇವಾದಳ ಧ್ವಜ ಸಂಹಿತೆ ಪುಸ್ತಕವನ್ನು ಕೋಲಾರ ತಾಲೂಕಿನ ಪ್ರತಿಯೊಂದು ಶಾಲೆಗಳಿಗೂ ತಲುಪಿಸಲಾಗಿತ್ತು. ಈ ಬಾರಿಯೂ ರಾಷ್ಟ್ರಧ್ವಜ ಸಂಹಿತೆ -೨೦೦೨ ರ ಪುಸ್ತಕ ಆಸಕ್ತಿ ಇರುವವರಿಗೆ ಸಿಗಲಿ ಎಂಬ ಕಾರಣದಿಂದ ಉಚಿತವಾಗಿ ತಾವು ಶಾಲಾ ಕಾಲೇಜು ಸರಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಿಗೆ ಹಂಚಿಕೆ ಮಾಡುತ್ತಿರುವುದಾಗಿ ವಿವರಿಸಿದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಪ್ರತಿಯೊಬ್ಬರೂ ರಾಷ್ಟ್ರಧ್ವಜ ಸಂಹಿತೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ರಾಷ್ಟ್ರಧ್ವಜಕ್ಕೆ ಯಾವುದೇ ಲೋಪವಾಗದಂತೆ ಧ್ವಜಾರೋಹಣ ನೆರವೇರಿಸಬೇಕೆಂದು ಈ ಕುರಿತು ಯಾವುದೇ ಮಾಹಿತಿಯನ್ನು ಭಾರತಸೇವಾದಳಸಂಸ್ಥೆಯಿಂದ ಪಡೆದುಕೊಳ್ಳಬಹುದು ಎಂದರು.
ಜಿಲ್ಲಾ ಸಮಿತಿ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಭಾರತ ಸೇವಾದಳ ಪ್ರಕಟಿಸಿರುವ ರಾಷ್ಟ್ರಧ್ವಜ ಸಂಹಿತೆಯ ಪುಸ್ತಕಗಳನ್ನು ಸಿಎಂಆರ್ ಶ್ರೀನಾಥ್ ಸೇವಾ ಮನೋಭಾವದಿಂದ ಉಚಿತವಾಗಿ ನೀಡುತ್ತಿದ್ದು, ಇವುಗಳನ್ನು ಪಡೆದು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್ ಮಾತನಾಡಿ, ರಾಷ್ಟ್ರಧ್ವಜ ಸಂಹಿತೆ ಪುಸ್ತಕ ಅಗತ್ಯವಿದ್ದ ಶಾಲಾ ಕಾಲೇಜುಗಳ ಮುಖ್ಯಸ್ಥರು ಕೋಲಾರ ಹಳೇ ಮಾಧ್ಯಮಿಕ ಶಾಲಾ ಆವರಣದ ಬಿಇಒ ಕಚೇರಿ ಪಕ್ಕದಲ್ಲಿರುವ ಭಾರತಸೇವಾದ ಜಿಲ್ಲಾ ಸಮಿತಿ ಕಚೇರಿಯಲ್ಲಿ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್‌ರನ್ನು ೯೫೩೫೭೫೭೭೨೮ಸಂಖ್ಯೆಯನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ ಎಂದರು.ಸಮಿತಿ ಸದಸ್ಯ ಕೆ.ಜಯದೇವ್ ಮಾತನಾಡಿ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತ ಪ್ರಾತ್ಯಕ್ಷಿಕೆ ತರಬೇತಿಯನ್ನು ಸೇವಾದಳ ನೀಡುತ್ತಿದ್ದು, ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಿದರು.
ಅರಾಭಿಕೊತ್ತನೂರು ವರ್ಗಾವಣೆಗೊಂಡಿರುವ ಮುಖ್ಯೋಪಾಧ್ಯಾಯ ಸಿ.ಎನ್.ಪ್ರದೀಪ್‌ಕುಮಾರ್ ಪ್ರಭಾರಿ ಮುಖ್ಯೋಪಾಧ್ಯಯರಾದ ಸಿದ್ದೇಶ್ವರಿ ಸೇರಿದಂತೆ ಶಾಲೆಯ ಶಿಕ್ಷಕರಿಗೆ ರಾಷ್ಟ್ರಧ್ವಜ ಸಂಹಿತೆಯನ್ನು ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಮಹೇಂದ್ರ,ಉಪಾಧ್ಯಕ್ಷೆ ಲಕ್ಷ್ಮಿ ಮಾಜಿ ಅಧ್ಯಕ್ಷ ಮುಳ್ಳಹಳ್ಳಿ ಮಂಜುನಾಥ್, ಹಾಲಿ ಸದಸ್ಯರಾದ ರಾಘವೇಂದ್ರ, ಮಂಜುನಾಥ್,ಶಿಕ್ಷಕರಾದ ಗೋಪಾಲಕೃಷ್ಣ,ಭವಾನಿ, ವೆಂಕಟರೆಡ್ಡಿ, ಕೆ.ಲೀಲಾ, ಶ್ವೇತಾ,ಸುಗುಣಾ, ಫರೀದಾ, ರಮಾದೇವಿ ಹಾಗೂ ಶಾಲಾ ವಿದ್ಯಾರ್ಥಿಗಳು, ಬೋಧಕ ವರ್ಗದವರು ಹಾಜರಿದ್ದರು. ಶಾಲಾ ಶಿಕ್ಷಕ ಸಿ.ಎಲ್.ಶ್ರೀನಿವಾಸಲು ಕಾರ್ಯಕ್ರಮ ನಿರೂಪಿಸಿದರು.