ರಾಷ್ಟ್ರೀಯ ಸೇವಾ ಯೋಜನೆ: ರಕ್ತದಾನ ಶಿಬಿರ

ರಾಯಚೂರು,ಜು.೨೯-
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ದತ್ತುಗ್ರಾಮ ವಡವಾಟಿಯಲ್ಲಿ ಆಯೋಜಿಸಿರುವ ೨೦೨೨-೨೩ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಕಾರ್ಗಿಲ್ ವಿಜಯ – ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಿತ್ತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ರಿಮ್ಸ್‌ನ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಅಹ್ಮದ್ ಹುಸೇನ್ ರಕ್ತದಾನವು ಮನುಷ್ಯ ಮಾಡಬಹುದಾದ ಎಲ್ಲ ದಾನಗಳಲ್ಲಿಯೇ ಶ್ರೇಷ್ಠವಾದುದ್ದು.
ಒಂದು ಯೂನಿಟ್ ರಕ್ತದಾನ ಮಾಡುವ ಮೂಲಕ ಮೂವರಿಗೆ ಜೀವದಾನ ಮಾಡಿದಂತಾಗುತ್ತದೆ. ರಕ್ತದಾನದಿಂದ ದಾನಿಗೂ ವೈಯಕ್ತಿಕವಾಗಿ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಹೊಂದಲು ಸಹಾಯಕವಾಗಿದೆ. ಹಾಗಾಗಿ ಎಲ್ಲ ಸಶಕ್ತ ವ್ಯಕ್ತಿಗಳೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ಸರಕಾರಿ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ವಡವಾಟಿಯಂಥ ಚಿಕ್ಕ ಗ್ರಾಮದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಿದುದು ಶ್ಲಾಘನೀಯ. ಇಂಥ ಸಮಾಜಸೇವಾ ಕಾರ್ಯಗಳು ವಿದ್ಯಾರ್ಥಿನಿಯರನ್ನು ಉತ್ತಮ ಸಾಮಾಜಿಕ ಜೀವನಕ್ಕೆ ಸಿದ್ಧಪಡಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಪುಷ್ಪ ಸಮಾಜ ಹಾಗೂ ರಾಷ್ಟ್ರ ಸೇವೆಯ ಕಾರ್ಯಗಳ ಜೊತೆಗೆ ವೈಯಕ್ತಿಕ ಸಾಮರ್ಥ್ಯಗಳ ಬೆಳವಣಿಗೆಗೂ ವಿದ್ಯಾರ್ಥಿನಿ ಸ್ವಯಂ ಸೇವಕಿಯರು ಆದ್ಯತೆ ನೀಡಬೇಕು. ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಮರ್ಪಿಸುತ್ತಿ ರುವುದು ಕೇವಲ ಸಮಾಜ ಸೇವೆ ಮಾತ್ರವಲ್ಲ ವಿದ್ಯಾರ್ಥಿನಿಯರ ದೇಶಭಕ್ತಿಯೂ ವ್ಯಕ್ತವಾಗುತ್ತಿದೆ ಎಂದು ಹೇಳಿ ಶಿಬಿರಕ್ಕೆ ಶುಭ ಹಾರೈಸಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ವಿದ್ಯಾರ್ಥಿನಿ ಸ್ವಯಂ ಸೇವಕಿಯರು ಸದರಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸುವಲ್ಲಿ ಸಾಕಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸಿದ್ದು, ಗ್ರಾಮಸ್ಥರ ಸಹಕಾರ ಹಾಗೂ ಕಳಕಳಿಯಿಂದಾಗಿ ಸದರಿ ಶಿಬಿರವು ಆಯೋಜನೆಗೊಂಡಿದೆ. ಕಾಲೇಜಿನ ಎನ್‌ಎಸ್‌ಎಸ್ ಘಟಕವು ಇಂಥ ಪರಿಣಾಮಕಾರಿ ಗುಣಾತ್ಮಕ ಚಟುವಟಿಕೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿನಿಯರ ವ್ಯಕ್ತಿತ್ವ ವಿಕಾಸಕ್ಕಾಗಿ ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರಿಮ್ಸ್‌ನ ರಕ್ತನಿಧಿ ಕೇಂದ್ರದ ಗೃಹವೈದ್ಯರಾದ ಡಾ. ಅಕ್ಷತಾ ಸಾಗರ್, ಡಾ. ಸಂಪತ್ ಸಾಗರ್, ಡಾ. ಸಮರ್ಥ, ಪ್ರಯೋಗಶಾಲೆ ತಂತ್ರಜ್ಞ ಅರುಣಜ್ಯೋತಿ ಸೇರಿದಂತೆ ಸಿಬ್ಬಂದಿಯಾದ ವಿಜಯಕುಮಾರ, ಭೀಮಾಶಂಕರ, ರಾಘವೇಂದ್ರ, ರಾಜು, ಕನಕರಾಯ, ಬನ್ನಪ್ಪ, ವಿಜಯ, ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿನಿ ಸ್ವಯಂ ಸೇವಕಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.