
ರಾಯಚೂರು,ಮಾ.೧೧- ಕೃಷಿ ಇಂಜಿನಿಯರಿಂಗ್ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ರೆಡ್ ಕ್ರಾಸ್ ಘಟಕ ಮತ್ತು ರಕ್ತ ನಿಧಿ ಕೇಂದ್ರ ರಿಮ್ಸ್ ರಾಯಚೂರು ಇವರ ಸಹಯೋಗದಲ್ಲಿ ರಕ್ತದಾನ ಮತ್ತು ಜಾಗೃತ ಶಿಬಿರವನ್ನು ಕೃಷಿ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಎಂ. ಹನುಮಂತಪ್ಪ ಅವರು ಮಾತನಾಡಿ, ಜೀವನದಲ್ಲಿ ಶ್ರೇಷ್ಠವಾದ ದಾನವೆಂದರೆ ಅದು ರಕ್ತದಾನ. ಏಕೆಂದರೆ ಒಬ್ಬರು ಮಾಡುವ ರಕ್ತದಾನದಿಂದ ಅತ್ಯವಶ್ಯಕತೆಯಲ್ಲಿರುವ ಮೂವರ ಜೀವಗಳನ್ನು ಉಳಿಸುವಲ್ಲಿ ಉಪಯುಕ್ತವಾಗುತ್ತದೆ ಮತ್ತು ರಕ್ತದಾನ ಮಾಡುವಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ಮುಂದೆ ಬಂದು ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಿದ ರಾಜ್ಯ ರೆಡ್ ಕ್ರಾಸ್ ಘಟಕದ ಅಧ್ಯಕ್ಷರಾದ ವಿಜಯಕುಮಾರ್ ಶಾವಂತಗೆರೆ ಅವರು ಸಮಾಜದಲ್ಲಿ ಅವಶ್ಯಕವಾಗಿರುವ ಸಾಮಾಜಿಕ ಜವಾಬ್ದಾರಿಯನ್ನು ಯುವಕರಲ್ಲಿ ಹೆಚ್ಚಿಸುವ ಕಾರ್ಯವನ್ನು ರಾಜ್ಯ ರೆಡ್ ಕ್ರಾಸ್ ಘಟಕ ಯಶಸ್ವಿಯಾಗಿ ಮಾಡುತ್ತಿದೆ ಎಂದು ಹೇಳಿ, ಹೈಜೀನ್ ಕಿಟ್ಟುಗಳನ್ನು ವಿತರಿಸಿದರು.
ರಾಯಚೂರಿನ ರಿಮ್ಸ್ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಮುಖ್ಯಸ್ಥರಾದ ಡಾ. ಪೂರ್ಣಿಮಾ ಪೋಸ್ತೆ ಅವರು ವಯಸ್ಕರು ರಕ್ತದಾನ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ಸವಿವರವಾಗಿ ವಿಸ್ತರಿಸಿ ಇದರಿಂದ ಹೃದಯ ರೋಗಗಳು ಮತ್ತು ಬಿಪಿ ಶುಗರ್ ನಂತಹ ಕಾಯಿಲೆಗಳು ನಿಯಂತ್ರಣದಲ್ಲಿರುತ್ತದೆ ಎಂದು ಹೇಳಿದರು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎಂ. ವೀರಣ್ಣಗೌಡ ಅವರು ರಕ್ತದಾನ ಮಾಡುವವರು ಆರೋಗ್ಯವಂತರಾಗಿರುತ್ತಾರೆ ಎಂದು ಹೇಳಿದರು ಮತ್ತು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನರಾದ ಡಾ. ಎಸ್.ಬಿ. ಗೌಡಪ್ಪ ಅವರು ರಕ್ತದಾನ ಮಾಡುವುದು ಮತ್ತು ಅದರ ಬಗ್ಗೆ ಇರುವ ದುರಾಭಿಪ್ರಾಯಗಳನ್ನು ದೂರ ಮಾಡಿಸುವಲ್ಲಿ ಯುವಕರು ಜವಾಬ್ದಾರಿ ವಹಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೃಷಿ ಇಂಜಿನಿಯರಿಂಗ್ ಮಹಾವಿದ್ಯಾಲಯದ ಡೀನರಾದ ಡಾ. ಎಂ. ನೇಮಿಚಂದ್ರಪ್ಪ ಅವರು ನಮ್ಮ ಇಂಜಿನಿಯರಿಂಗ್ ಮಹಾವಿದ್ಯಾಲಯವು ಪ್ರತಿ ವರ್ಷವು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತಿದೆ ಮತ್ತು ಅವಶ್ಯಕತೆ ಇದೆ ಎಂದು ಯಾರೂ ಹೇಳಿದರು. ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಹೋಗಿ ರಕ್ತ ನೀಡಿ ಬರುತ್ತಿದ್ದಾರೆ ಮತ್ತು ಇಂಥ ಸಮಾಜಮುಖವಾದ ಕಾರ್ಯಕ್ರಮಗಳನ್ನು ಮಾಡುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.
ಕೃಷಿ ಇಂಜಿನಿಯರಿಂಗ್ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಯೇಸಪ್ಪ ಎಲ್ ಡಾ. ಮುರಳಿ ಎಂ ಹಾಗೂ ಡಾ. ಮಲ್ಲಿಕಾರ್ಜುನ ದಂಡು ಅವರು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಸಂಯೋಜಕರಾದ ಡಾ. ಆರ್.ವಿ. ಬೆಳದಡಿ, ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಡಾ. ರಾಜಣ್ಣ, ಮಹಾವಿದ್ಯಾಲಯದ ಎಲ್ಲಾ ವಿಭಾಗದ ಮುಖ್ಯಸ್ಥರುಗಳು ಮತ್ತು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎನ್‌ಎಸ್‌ಎಸ್ ಸ್ವಯಂಸೇವಕರಾದ ಶ್ರೇಯಸ್ ನಿರೂಪಿಸಿದ ಈ ಕಾರ್ಯಕ್ರಮಕ್ಕೆ ಸೌಂದರ್ಯ ಸ್ವಾಗತಿಸಿದರು ಮತ್ತು ಶ್ರೀಲಕ್ಷ್ಮಿ ವಂದಿಸಿದರು. ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಲು ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿವಿಧ ವಿಭಾಗದ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.