ರಾಷ್ಟ್ರೀಯ ಸಂವಹನ ಕಾಂಗ್ರೆಸ್  ಅಧ್ಯಕ್ಷರಾಗಿ  ಕೊಪ್ಪಳ ವಿ.ವಿ. ಯ ಪ್ರೊ. ಬಿಕೆ ರವಿ  ಆಯ್ಕೆ.

ಸಂಜೆವಾಣಿ ವಾರ್ತೆಕೊಪ್ಪಳ, ಅ.27;  ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ. ರವಿಯವರು ರಾಷ್ಟ್ರೀಯ ಸಂವಹನ ಕಾಂಗ್ರೆಸ್ (National Communication Congress)ನ ಕಾರ್ಯಕಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ದೇಶದ ಮಾಧ್ಯಮ ವಿದ್ವಾಂಸರು, ಸಂವಹನ ತಜ್ಞರು, ಮಾಧ್ಯಮ ಶಿಕ್ಷಕರು, ಸಂಶೋಧಕರು ಮತ್ತು ಭಾರತೀಯ ಮಾಧ್ಯಮದ ವೃತ್ತಿಪರರನ್ನು ಒಳಗೊಂಡಿರುವ ರಾಷ್ಟ್ರೀಯ ಸಂವಹನ ಕಾಂಗ್ರೆಸ್, ರಾಷ್ಟ್ರದಾದ್ಯಂತ ಮಾಧ್ಯಮಕ್ಕೆ ಸಂಬಂಧಿಸಿದ ವಿಚಾರ ಸಂಕಿರಣಗಳು, ಸಮ್ಮೇಳನಗಳು, ಪ್ರಕಟಣೆಗಳು, ತರಬೇತಿ ಹಾಗೂ ಸಂಶೋಧನೆಗಳನ್ನು ನಡೆಸಲಿದೆ. ಭಾರತೀಯ ಮಾಧ್ಯಮ ಶಿಕ್ಷಣ ಹಾಗೂ ಭಾರತೀಯ ಮಾಧ್ಯಮ ಉದ್ಯಮದ ನಡುವೆ ಸಂಪರ್ಕ ಸಾಧಿಸುವ ಸೇತುವೆಯಾಗಿ ಎನ್.ಸಿ.ಸಿ. ಕಾರ್ಯನಿರ್ವಹಿಸಲಿದೆ.ಕೊಲ್ಕತ್ತ, ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸ್ಥಾನ ಹೊಂದಿರುವ ಎನ್.ಸಿ.ಸಿ.ಯ ಅಧ್ಯಕ್ಷರಾಗಿ ವಿಶ್ವಭಾರತಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಬಿಪ್ ಲ್ಯಾಬ್ ಲೋಹಾ ಚೌಧುರಿ; ಉಪಾಧ್ಯಕ್ಷರಾಗಿ ಮಕನ್ ಲಾಲ್ ಚತುರ್ವೇದಿ ರಾಷ್ಟ್ರೀಯ ಪತ್ರಿಕೋದ್ಯಮ ಮತ್ತು ಸಂವಹನ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಜಿ. ಸುರೇಶ್ ಹಾಗೂ ಮಹಾಪ್ರಧಾನ ಕಾರ್ಯದರ್ಶಿಯಾಗಿ ಭುವನೇಶ್ವರ ಉಕ್ಕಲ್ ವಿಶ್ವವಿದ್ಯಾಲಯದ ಮಾಧ್ಯಮ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಉಪೇಂದ್ರ ಪಾಢಿಚುನಾಯಿತರಾಗಿದ್ದಾರೆ.