ರಾಷ್ಟ್ರೀಯ ಶಿಕ್ಷಣ ನೀತಿ;  ಶೈಕ್ಷಣಿಕ ಕಾರ್ಯಾಗಾರ

ದಾವಣಗೆರೆ.ಸೆ.೨೨: ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಾತೃಭಾಷೆ ಕನ್ನಡ ವಿಷಯದಲ್ಲಿ ಕಡಿಮೆ ಫಲಿತಾಂಶ ಬಂದಿದ್ದು, ಈ ಬಗ್ಗೆ ಶಿಕ್ಷಕರು ಪುನರಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ (ಆಡಳಿತ) ಉಪ ನಿರ್ದೇಶಕ ಜಿ.ಆರ್. ತಿಪ್ಪೇಶಪ್ಪ ಹೇಳಿದರು.ನಗರದ ಎವಿಕೆ ಕಾಲೇಜು ರಸ್ತೆಯಲ್ಲಿರುವ ಗುರುಭವನದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಲ್ಲೂಕು ಘಟಕದ ಉತ್ತರ ವಲಯದಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಶೈಕ್ಷಣಿಕ ಕಾರ್ಯಾಗಾರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿಕ್ಷಕರು ಮಾಡಿದ ಬೋಧನಾ ಕ್ರಮದಲ್ಲಿ ವ್ಯತ್ಯಾಸವೋ, ಪ್ರಶ್ನೆ ಪತ್ರಿಕೆಗಳ ಜೋಡಣೆಗಳ ದೋಷವೋ, ಮೌಲ್ಯ ಮಾಪನದಲ್ಲಿ ಏನಾದರೂ ತೊಂದರೆ ಇದೆಯೇ ಎಂದು ನಿಮ್ಮ ನಿಮ್ಮ ವಿಷಯವಾರು ಸಮಿತಿಯಲ್ಲಿ ಚರ್ಚಿಸಿ ಮುಂದಿನ ಪ್ರಕ್ರಿಯೆಗೆ ಮುಂದಾಗಬೇಕು. ಮಾತ್ರವಲ್ಲ ದಸರಾ ರಜೆಯಲ್ಲಿ ಶೈಕ್ಷಣಿಕ ಬಲವರ್ಧನೆ ಮಾಡಿಕೊಳ್ಳುವ ಮೂಲಕ ಮಕ್ಕಳನ್ನು ಮಾನಸಿಕವಾಗಿ ಸಿದ್ಧಗೊಳಿಸುವ ಜತೆಗೆ ಫಲಿತಾಂಶದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.ಈ ಹಿಂದಿನ ಎರಡು ವರ್ಷಗಳಿಗಿಂತ ಈ ವರ್ಷ ಭಿನ್ನವಾಗಿದೆ. ಪರೀಕ್ಷಾ ವಿಧಾನಗಳು ಬದಲಾಗಲಿವೆ. ಕಾರಣ ಶಿಕ್ಷಕರು ಹೀಗಿನಿಂದಲೇ ಪರೀಕ್ಷೆಗೆ ಮಕ್ಕಳನ್ನು ಅಣಿ ಮಾಡುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶನದಲ್ಲಿ ಮಕ್ಕಳಿಗೆ ಬೋಧನಾ ಮಾಡುವ ಮೂಲಕ ದಾವಣಗೆರೆ ಜಿಲ್ಲೆಯ ಫಲಿತಾಂಶವನ್ನು ಉತ್ತಮ ಗುಣಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಬೇಕೆಂದು ಕರೆ ನೀಡಿದರು.