ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ, ಪ್ರತಿಭಟನೆ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ2: ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ, ಸಿಪಿಐ(ಎಂ) ವಿಜಯನಗರ ಘಟಕದ ಪದಾಧಿಕಾರಿಗಳು ತಹಶೀಲ್ದಾರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಶ್ರಮಿಕ ಭವನದಿಂದ ಮೆರವಣಿಗೆ ಮೂಲಕ ತಹಶೀಲ್ದಾರ ಕಚೇರಿ ಆವರಣದಲ್ಲಿ ಆಗಮಿಸಿದ ಪ್ರತಿಭಟನಾಕಾರರು, ಕನ್ನಡ ಭಾಷೆ ಮತ್ತು ಕನ್ನಡಿಗರ ಅಭಿವೃದ್ಧಿಗೆ ಮಾರಕವಾದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸುತ್ತಿರುವುದನ್ನು ತಕ್ಷಣವೇ ತಡೆಹಿಡಿಯುವಂತೆ ಆಗ್ರಹಿಸಿದರು. 
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಮಹಿಳೆಯರು, ದಲಿತರು ಹಾಗೂ ಹಿಂದುಳಿದವರ್ಗಗಳ ಬಡವರಿಗೆ ಅಂದರೆ ಶೇ.95ರಷ್ಟು ಜನರಿಗೆ ಶಿಕ್ಷಣ ಮರೀಚಿಕೆಯಾಗಲಿದೆ. ರಾಜ್ಯದ ಕನ್ನಡ ಹಾಗೂ ಕನ್ನಡೀಗರ ಇತರೆ ಮಾತೃಭಾಷೆಗಳಾದ ತುಳು, ಕೊಡವ, ತೆಲುಗು, ಉರ್ದು, ಮರಾಠಿ, ಕೊಂಕಣಿ, ಲಂಬಾಣಿ ಸೇರಿದಂತೆ ಇತರೆ ಭಾಷೆಗಳ ಮೇಲೆ ಇಂಗ್ಲಿಷ್, ಸಂಸ್ಕøತ ಹಾಗೂ ಹಿಂದಿ ಭಾಷೆಗಳನ್ನು ಹೇರುವ ಹುನ್ನಾರ ಈ ನೀತಿ ಹೊಂದಿದೆ ಎಂದು ಆರೋಪಿಸಿದರು. .
ಶಿಕ್ಷಣ ಕ್ಷೇತ್ರವನ್ನು ಕಾರ್ಪೋರೇಟ್ ಹಾಗೂ ಖಾಸಗಿ ಸಂಸ್ಥೆಗಳ ಬೃಹತ್ ಲೂಟಿಗೆ ಅವಕಾಶ ತೆರೆಯುವ ಹುನ್ನಾರದ ಭಾಗವಾಗಿದೆ. ಉದ್ಯೋಗದ ಅಭಾವ ಹಾಗೂ ಸಾಮಾಜಿಕ ನ್ಯಾಯಕ್ಕೆ ಮಾರಕವಾಗಲಿದ್ದು ತಡೆಯುವಂತೆ ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಜತೆ ಹಾಗೂ ಶಿಕ್ಷಣ, ಭಾಷಾ ತಜ್ಞರ ಜತೆಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಮೇಘನಾ ಅವರಿಗೆ ಮನವಿಪತ್ರ ಸಲ್ಲಿಸಿದರು. ಸಿಪಿಐಎಂನ ಪದಾಧಿಕಾರಿಗಳಾದ ಆರ್.ಎಸ್. ಬಸವರಾಜ, ಆರ್. ಭಾಸ್ಕರ್‍ರೆಡ್ಡಿ, ಎಂ. ಜಂಬಯ್ಯ ನಾಯಕ, ಎಂ. ಗೋಪಾಲ್, ಎನ್. ಯಲ್ಲಾಲಿಂಗ, ವಿ. ಸ್ವಾಮಿ, ಕಲ್ಯಾಣಯ್ಯ, ಮಂಜುನಾಥ ಹಾಗೂ ರಾಮಾಂಜನಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.