ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.11: ರಾಷ್ಟ್ರೀಯ ಶಿಕ್ಷಣ ನೀತಿ ಅಪ್ರಜಾತಾಂತ್ರಿಕವಾಗಿದ್ದು ಅದನ್ನು   ತರಾತುರಿಯ ಜಾರಿಗೆ ತರುವುದನ್ನು  ವಿರೋಧಿಸಿ ನಗರದಲ್ಲಿ ಇಂದು ಎಐಡಿಎಸ್ ಓ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ  ಜಿಲ್ಲಾ ಅಧ್ಯಕ್ಷ ಗುರಳ್ಳಿ ರಾಜ ಅವರು.‌ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಕರ್ನಾಟಕ ರಾಜ್ಯದಲ್ಲಿ ಎನ್‌ಇಪಿ-2020 ಅನ್ನು ಅನುಸ್ಠಾನಕ್ಕೆ ತರಲು ನಿರ್ಧರಿಸಲಾಗಿದೆ. ಈ ನೀತಿಯ ಪ್ರಸ್ತಾವನೆ ಆದಾಗಿನಿಂದಲೂ, ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಸಾಹಿತಿಗಳು, ವಿದ್ಯಾರ್ಥಿಗಳು ಹಾಗು ಪೋಷಕರು ವ್ಯಾಪಕ ವಿರೋಧವನ್ನು ವ್ಯಕ್ತಪಡಿಸಿದ್ದು ಸಹ ತಮ್ಮ ಗಮನದಲ್ಲಿ ಇದೆ. ಎನ್‌ಇಪಿ-2020ರ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತರಲು ಪ್ರಸ್ತಾಪಿಸಿದ್ದ ಹಲವು ಬದಲಾವಣೆಗಳು ಅಥವಾ ಸೇರ್ಪಡೆಗಳ ಕುರಿತು ಹಲವಾರು ಅಂಶಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಮತ್ತು ಭಿನ್ನಾಭಿಪ್ರಾಯಗಳಿಗೆ ಗ್ರಾಸವಾಗಿತ್ತು. ಆದರೆ, ರಾಜ್ಯ ಸರ್ಕಾರ ಅತ್ಯಂತ ತರಾತುರಿಯಲ್ಲಿ, ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ಏಕಾಏಕಿ ಎನ್‌ಇಪಿ ಭಾಗವಾಗಿರುವ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ಅನುಷ್ಠಾನಕ್ಕೆ ತಂದಿದೆ. ಆ ಮೂಲಕ ರಾಜ್ಯದ ಶಿಕ್ಷಕ ವರ್ಗ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರವಾಗಿದೆಂದರು.
ಸರ್ಕಾರ ಜನತೆಯ, ಶಿಕ್ಷಕರ, ವಿದ್ಯಾರ್ಥಿಗಳು ಮತ್ತು ಸಂಘಟನೆಗಳ ಎಲ್ಲ ಅಭಿಪ್ರಾಯಗಳನ್ನು ಪ್ರಜಾತಾಂತ್ರಿಕವಾಗಿ, ಕೂಲಂಕುಷವಾಗಿ ಗಮನಿಸಿ, ಗಣನೆಗೆ ತೆಗೆದುಕೊಂಡು ನೂತನ ಶೈಕ್ಷಣಿಕ ನೀತಿಯ ಬಗ್ಗೆ ವಿಮರ್ಶೆ ಮಾಡಬೇಕು ಎಂದು ಅಪೇಕ್ಷಿಸುತ್ತೇವೆ. ಅಲ್ಲಿಯವರೆಗೂ, ಈಗ ಅನುಷ್ಠಾನಕ್ಕೆ ತಂದಿರುವ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ವಿದ್ಯಾರ್ಥಿಗಳು, ಶಿಕ್ಷಕರ ಭವಿಷ್ಯ ಹಾಗು ಶಿಕ್ಷಣದ ಗುಣಮಟ್ಟವನ್ನು ಕಾಪಾಡುವ ಸದುದ್ದೇಶದಿಂದ ಸರ್ಕಾರ ವಾಪಸ್ ಪಡೆಯಬೇಕು. ಈ ವರ್ಷದ ವಿದ್ಯಾರ್ಥಿ ಬಸ್ ಪಾಸ್ ಅನ್ನು ಉಚಿತವಾಗಿ ನೀಡಬೇಕು ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯರಾದ ಕೆ.ಈರಣ್ಣ, ಎಂ.ಶಾಂತಿ. ಮಂಜುನಾಥ, ನಿಂಗರಾಜ, ಅನುಪಮ, ಸಿದ್ದು, ನಿಹಾರಿಕ ಹಾಗೂ ಜಿಲ್ಲಾ ಸಮಿತಿ ಸದಸ್ಯರುಗಳಾದ ಉಮಾದೇವಿ, ನಾಗರತ್ನ ಮತ್ತು ಮುಂತಾದವರು ಭಾಗವಹಿಸಿದ್ದರು.