
ಸಂಜೆವಾಣಿ ವಾರ್ತೆ
ಹೊಸಪೇಟೆ ಆ3: ಯಾವುದೇ ರೋಗವಾದರೂ ಅದನ್ನು ಮುಚ್ಚಿಟ್ಟುಕೊಳ್ಳದೇ ಚಿಕಿತ್ಸಕ ಕ್ರಮ ಅನುಸರಿಸಿ ಗುಣಮುಖರಾಗುವತ್ತ ಪ್ರತಿಯೊಬ್ಬರೂ ಗಮನ ಹರಿಸಬೇಕು ಎಂದು ಶಾಸಕ ಹೆಚ್.ಆರ್.ಗವಿಯಪ್ಪ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ವಿಶ್ವ ಹೆಪಾಟೈಟಿಸ್ ದಿನದ ಅಂಗವಾಗಿ ಹೊಸಪೇಟೆ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈರಲ್ ಹೆಪಾಟೈಟಿಸ್ ನಿಯಂತ್ರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಹೆಪಾಟೈಟಿಸ್ ಖಾಯಿಲೆ ಅಪಾಯಕರವಾದರೂ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬಹುದಾಗಿದೆ. ಸರ್ಕಾರದ ಯೋಜನೆಯಿಂದ ಚಿಕಿತ್ಸೆ ಲಭ್ಯವಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು. ರೋಗದ ವಿರುದ್ಧ ಜಾಗೃತಿ ಸಹ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ. ಅವರು ಮಾತನಾಡಿ ಹೆಪಾಟೈಟಿಸ್ ರೋಗ ಹಲವು ವಿಧಗಳನ್ನು ಹೊಂದಿದೆ. 9 ಲಕ್ಷ ಜನರು ಈ ರೋಗದಿಂದ ಬಾಧಿತರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ 32 ಕೋಟಿ ಜನ ರೋಗದಿಂದ ಬಳಲುತ್ತಿದ್ದಾರೆ ಎಂಬುದು ರೋಗದ ಅಗಾಧತೆ ಅರಿವಿಗೆ ಬರುತ್ತದೆ. ರೋಗ ಲಕ್ಷಣಗಳು ಕಂಡುಬಂದರೆ ಅದನ್ನು ಮರೆಮಾಚದೆ ಪರೀಕ್ಷೆಗೆ ಒಳಪಟ್ಟು ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು. ಪ್ರತಿಯೊಬ್ಬರೂ ಪ್ರತಿದಿನ ರೋಗದ ವಿರುದ್ಧ ಹೋರಾಡಿದಾಗ ಶೂನ್ಯ ಮಟ್ಟಕ್ಕೆ ರೋಗವನ್ನು ತರಬಹುದು ಎಂದರು.
ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಅವರು ಮಾತನಾಡಿ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರೂ ಸಂಕೋಚ ಬಿಟ್ಟು ಸಮಾಜದಲ್ಲಿ ಮುನ್ನೆಲೆಗೆ ಬರಬೇಕು. ಸರ್ಕಾರದಿಂದ ಒದಗಿಸಲಾಗುವ ವಿವಿಧ ಯೋಜನೆಗಳು ಹಾಗೂ ಮೀಸಲಾತಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಹೆಪಾಟೈಟಿಸ್ ರೋಗದ ವಿರುದ್ಧ ಜಾಗೃತಿ ಅವಶ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವೈರಲ್ ಹೆಪಾಟೈಟಿಸ್ ನಿಯಂತ್ರಣ ಕಾರ್ಯಕ್ರಮ ಹಾಗೂ ಮಿಷನ್ ಇಂದ್ರಧನುಷ್ ಲಸಿಕಾಕರಣ ಕಾರ್ಯಕ್ರಮದ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ ಅಧ್ಯಕ್ಷತೆ ವಹಿಸಿಕೊಂಡಿದ್ದರು. ವೈದ್ಯಾಧಿಕಾರಿಗಳಾದ ಡಾ.ಭಾಸ್ಕರ್, ಡಾ.ಜಂಬಯ್ಯ, ಡಾ.ಜಗದೀಶ್ ಪಾಟ್ನೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಸೇರಿದಂತೆ ವಿವಿಧ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಹಾಗೂ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
One attachment • Scanned by Gmail