ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ದಿನಾಚರಣೆ

ಕೋಲಾರ ಆ.೬- ಯಾವುದೇ ರೋಗವಾದರೂ ಅದನ್ನು ಮುಚ್ಚಿಟ್ಟು ಕೊಳ್ಳದೇ ನಿರ್ಭಯದಿಂದ ಚಿಕಿತ್ಸಕ ಕ್ರಮ ಅನುಸರಿಸಿ ಗುಣಮುಖರಾಗುವತ್ತ ಪ್ರತಿಯೊಬ್ಬರೂ ಗಮನ ಹರಿಸ ಬೇಕೆಂದು ಕೋಲಾರ ವಿಧಾನಸಭಾ ಶಾಸಕ ಡಾ. ಜಿ ಕೊತ್ತೂರು ಮಂಜುನಾಥ್ ಕರೆ ನೀಡಿದರು,
ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋಲಾರ ಜಿಲ್ಲೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಪಟೈಟಿಸ್ ಖಾಯಿಲೆ ಅಪಾಯಕರ ವಾದರೂ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬಹುದಾಗಿದೆ. ಸರ್ಕಾರದ ಯೋಜನೆಯಿಂದ ಎಲ್ಲಾ ವಿಧವಾದ ಚಿಕಿತ್ಸೆಗಳು ಲಭ್ಯವಿದ್ದು, ಪ್ರತಿಯೊಬ್ಬರೂ ಇದರ ಸದ್ಭಳಿಕೆ ಮಾಡಿಕೊಳ್ಳಬೇಕು. ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮವು ಒಂದು ಸಮಗ್ರ ಯೋಜನೆಯಾಗಿದ್ದು ಎ, ಬಿ, ಸಿ, ಡಿ, ಮತ್ತು ಇ, ಅನ್ನು ತಡೆಗಟ್ಟುವ ಹಾಗೂ ನಿಯಂತ್ರಣ ಮಾಡುವ ಮೂಲಕ ೨೦೩೦ರ ವೇಳೆಗೆ ಹೆಪಟೈಟಿಸ್ ಮುಕ್ತ ದೇಶವನ್ನಾಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
ಹೆಪಟೈಟಿಸ್ ರೋಗದ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು, ತಮ್ಮ ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನಿಸುವ ಎಲ್ಲ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳ ಹಾಗೆ ಭಾವಿಸಬೇಕು ಎಂದು ಆಶಾ ಕಾರ್ಯಕರ್ತರಿಗೆ ಕಿವಿ ಮಾತು ತಿಳಿಸಿದರು,
ಕೋಲಾರ ವಿಧಾನ ಪರಿಷತ್ ಶಾಸಕರಾದ ಎಂ.ಎಲ್.ಸಿ. ಅನಿಲ್ ಕುಮಾರ್ ಅವರು ಮಾತನಾಡಿ ಹೆಪಟೈಟಿಸ್ ರೋಗವು ಹೆಚ್ಚಾಗಿ ಕಲುಷಿತ ಆಹಾರ ಅಥವಾ ನೀರಿಗೆ ಒಡ್ಡಿಕೊಳ್ಳುವುದರ ಮೂಲಕ ಅಥವಾ ಸೋಂಕಿತ ವ್ಯಕ್ತಿಯೊಂದಿಗೆ ವೈಯಕ್ತಿಕ ಸಂಪರ್ಕದ ಮೂಲಕ ಹರಡುತ್ತದೆ ಎಂದು ತಿಳಿಸಿದರು.
ಹೆಪಟೈಟಿಸ್ ಬಿ ಮತ್ತು ಸಿ ಇಂದ ಬಳಲುತ್ತಿರುವವರಿಗೆ ಸರ್ಕಾರವು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿಗಳನ್ನು ನೀಡುತ್ತಿದೆ ಹಾಗೂ ಜಿಲ್ಲಾಮಟ್ಟದ ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಉಚಿತ ತಪಾಸಣೆ ಹೆಚ್ಚಿನ ಪ್ರಯೋಗಾಲಯ ಸೇವೆಗಳನ್ನು ನೀಡುತ್ತಿದೆ ಇದನ್ನು ಎಲ್ಲಾ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಐಸಿ ಕರಪತ್ರಗಳನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ. ಶಂಕರ್ ವಾಣಿಕ್ಯಳ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಜಗದೀಶ್ , ಜಿಲ್ಲಾ ಎಸ್.ಎನ್.ಆರ್. ಆಸ್ಪತ್ರೆಯ ಶಸ್ತ್ರ ಚಿಕಿತ್ಸಾಕರ ಡಾ. ವಿಜಯಕುಮಾರ್, ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಯಾದ ಡಾ. ಜಿ ಪ್ರಸನ್ನಕುಮಾರ್ ಡಾ. ಚಾರಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ಎಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಬಿ,ವಿ ಚೇತನ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.