ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ಸಿ.ವಿ.ರಾಮನ್ ಸ್ಮರಣೆ

ಚಿತ್ತಾಪುರ:ಮಾ.2: ವಿದ್ಯಾರ್ಥಿಗಳು ಪ್ರಶ್ನೆಗಳು ಕೇಳುವುದು ಹಾಗೂ ಕೂತುಹಲ ಹೆಚ್ಚಿಸಿಕೊಳ್ಳುವ ಮೂಲಕ ತಮ್ಮ ಜ್ಞಾನದ ಮಟ್ಟವನ್ನು ವೃದ್ದಿಸಿಕೊಳ್ಳಬೇಕು ಎಂದು ಎಸ್‍ಡಿಎಂಸಿ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.

ಪಟ್ಟಣದ ನಾಗಾವಿ ಕ್ಯಾಂಪಸ್‍ನಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜ್ಞಾನಿ ಸಿ.ವಿ.ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಯಾರಲ್ಲಿ ಪ್ರಶ್ನೆ ಕೇಳುವ ಮನೋಭಾವನೆ ಇರುತ್ತದೆಯೋ ಅಂತಹ ವಿದ್ಯಾರ್ಥಿ ಜೀವನದಲ್ಲಿ ಏನಾದರೊಂದು ಸಾಧಿಸುತ್ತಾನೆ. ಹೀಗಾಗಿ ಸಾಕಷ್ಟು ಪ್ರಶ್ನೆಗಳು ಕೇಳುವ ದೈರ್ಯ ಮಾಡಬೇಕು ಎಂದು ಕಿವಿಮಾತು ಹೇಳಿದರು.

ವೈಜ್ಞಾನಿಕ ಚಿಂತನೆ ಮಾಡಬೇಕು ಯಾವುದು ಸರಿ ತಪ್ಪು ಹಾಗೂ ನಂಬಿಕೆ ಮತ್ತು ಮೂಡನಂಬಿಕೆ ಯಾವುದೆಂಬುದರ ಬಗ್ಗೆ ತಿಳಿದುಕೊಳ್ಳಬೇಕು, ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಮೂಢನಂಬಿಕೆ ಕಡೆ ಮುಖ ಮಾಡುತ್ತಾರೆ ಅದು ತಪ್ಪು ನಡೆಯಾಗಿದ್ದು, ಪರಿಶ್ರಮದಿಂದ ಯಾವ ವಿದ್ಯಾರ್ಥಿ ಅಭ್ಯಾಸ ಮಾಡುತ್ತಾನೋ ಅಂತಹ ವಿದ್ಯಾರ್ಥಿಯೇ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳು ಪಡೆಯಲು ಸಾಧ್ಯ ಹೀಗಾಗಿ ಮಠ ಮಂದಿರಕ್ಕೆ ಹೋಗಿ ಕಾಲಹರಣ ಮಾಡದೇ ಶಿಸ್ತುಬದ್ದವಾಗಿ ಅಭ್ಯಾಸ ಮಾಡುವ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ವಿಜ್ಞಾನ ಶಿಕ್ಷಕಿ ಜನತುಲ್ ಫಿರ್‍ದೋಸ್ ಮಾತನಾಡಿ, ಜೀವನದಲ್ಲಿ ವಿಜ್ಞಾನದ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ವಿಜ್ಞಾನ ಕ್ಷೇತ್ರದಲ್ಲಿ ಮೊದಲ ಭಾರತ ರತ್ನ ಪ್ರಶಸ್ತಿ ಪುರಸ್ಕøತ ಸಿ.ವಿ.ರಾಮನ್ ಅವರು ರಾಮನ್ ಪರಿಣಾಮ ಸಿದ್ದಾಂತವನ್ನು ಪ್ರತಿಪಾದಿಸಿದ ಪ್ರಯುಕ್ತ ಪ್ರತಿ ವರ್ಷ ಅವರ ಸ್ಮರಣೆಗಾಗಿ ಫೆ.28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ ಮುಖ್ಯಶಿಕ್ಷಕಿ ಸುನಂದಾ ಬಾರಾಡ್ ಮಾತನಾಡಿದರು. ಪತ್ರಕರ್ತ ರವಿಶಂಕರ ಬುರ್ಲಿ, ಶಿಕ್ಷಕರಾದ ಶಿವಬಸಪ್ಪ ಗುತ್ತೆಪ್ಪನವರ್, ಸಂತೋಷಕುಮಾರ, ಹಣಮಂತ ಗನ್ವಾರಕರ್, ರೇಣುಕಾ ರೋಣದ್, ಲಕ್ಷ್ಮೀ ಗಂಜಿ ಇದ್ದರು. ಶಿಕ್ಷಕ ಶಿವಪುತ್ರಪ್ಪ ವಿ.ಬಿ ನಿರೂಪಿಸಿದರು. ವಿದ್ಯಾರ್ಥಿಗಳು ವಿಜ್ಷಾನದ ವಿವಿಧ ಮಾದರಿಗಳು ರಚಿಸಿರುವುದು ಆಕರ್ಷಕವಾಗಿ ಕಂಡುಬಂದಿತ್ತು.