ರಾಷ್ಟ್ರೀಯ ವಿಜ್ಞಾನ ದಿನಾಚರಣೆ; ಪೋಸ್ಟರ್ ಪ್ರದರ್ಶನ ಕಾರ್ಯಕ್ರಮ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.02: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಧ್ಯೇಯವಾಕ್ಯವಾದ ‘ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ’ ಎಂಬುದಕ್ಕೆ ಪೂರಕವಾಗಿ ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ವಿಜ್ಞಾನದ ಹಲವಾರು ಇತ್ತೀಚಿನ ಪ್ರಚಲಿತ ಆವಿಷ್ಕಾರಗಳ ಕುರಿತು ವಿದ್ಯಾರ್ಥಿಗಳಿಂದ ಪೋಸ್ಟರ್ ಪ್ರದರ್ಶನ ಕಾರ್ಯಕ್ರಮವನ್ನು ವಿಭಾಗದ ಫೋಟಾನ್ ಅಸೋಷಿಯೇಶನ್ ವತಿಯಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿದ್ದು ಪಿ ಆಲಗೂರ ಉದ್ಘಾಟಿಸಿದರು.
ಪ್ರತಿ ಪೋಸ್ಟರ್‍ಗಳನ್ನು ಪರಿಶೀಲಿಸಿದ ಕುಲಪತಿಗಳು, ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಅವರಿಗೆ ಸಂಶೋಧನೆಗೆ ಅಗತ್ಯವಿರುವ ಮತ್ತಷ್ಟು ವಸ್ತು ವಿಷಯಗಳನ್ನು ತಿಳಿಸಿದರು. ವಿಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರಗತಿಯ ಪ್ರಗತಿ ಸಾಧಿಸುತ್ತಿರುವ ದೇಶದಲ್ಲಿ ವಿದ್ಯಾರ್ಥಿಗಳೇ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಇವುಗಳ ಕುರಿತು ವಿವರಣೆ ನೀಡುತ್ತಿರುವುದು ವಿಶ್ವವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದರ ನಿದರ್ಶನ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಪ್ರಯತ್ನಕ್ಕೆ ಹರ್ಷ ವ್ಯಕ್ತಪಡಿಸಿ ವೈಯಕ್ತಿಕವಾಗಿ ನಗದು ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿದರು.
ಒಟ್ಟು 14 ವಿವಿಧ ಪೋಸ್ಟರ್‍ಗಳನ್ನು ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ತಲಾ 5 ಜನರ ತಂಡವಾಗಿ ಸಿದ್ಧಪಡಿಸಿ ಅವುಗಳ ಬಗ್ಗೆ ನೆರೆದಿದ್ದವರಿಗೆ ಮಾಹಿತಿ ಒದಗಿಸಿದರು. ನ್ಯಾನೋ ಟೆಕ್ನಾಲಜಿ, ಇಲೆಕ್ಟ್ರಿಕ್ ವೆಹಿಕಲ್, ಸೋಲಾರ್ ಸಿಸ್ಟಮ್, ವೈರ್‍ಲೆಸ್ ಇಲೆಕ್ಟ್ರಿಸಿಟಿ, ಸೆನ್ಸರ್ಸ್ ಇನ್ ಏರ್ ಪೊಲುಷನ್, ಇ-ವೇಸ್ಟ್ ಮ್ಯಾನೇಜ್‍ಮೆಂಟ್, ಥ್ರಿ ಐ ಟೆಕ್ನಾಲಜಿ, ಸಸ್ಟೆನೆಬಲ್ ಓಷಿಯನ್ ಟೆಕ್ನಾಲಜಿ, ಗ್ರೀನ್ ಹೈಡ್ರೋಜನ್ ಮುಂತಾದ ಪ್ರಚಲಿತ ವಿಷಯಗಳ ಕುರಿತು ವಿದ್ಯಾರ್ಥಿಗಳು ಪೋಸ್ಟರ್ ಪ್ರದರ್ಶಿಸಿದರು.
ದಿನದ ಕೊನೆಯಲ್ಲಿ ವಿಷಯ ಪರಿಣಿತರು ಮೂರು ಉತ್ತಮ ಪೋಸ್ಟರ್‍ಗಳನ್ನು ಆಯ್ಕೆ ಮಾಡಿ ಆಯಾ ತಂಡಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಭೌತಶಾಸ್ತ್ರ ವಿಭಾಗದ ಫೋಟಾನ್ ಅಸೋಷಿಯೇಶನ್ ಸಂಯೋಜಕರಾದ ಡಾ. ಕೊಟ್ರೇಶ್ ತಿಳಿಸಿದರು.
ವಿಭಾಗದ ಮುಖ್ಯಸ್ಥರಾದ ಡಾ. ಖಡ್ಕೆ ಉದಯ ಕುಮಾರ್, ಅನ್ವಯಿಕ ವಿಜ್ಞಾನ ನಿಕಾಯದ ಡೀನರಾದ ಪ್ರೊ. ತಿಪ್ಪೇರುದ್ರಪ್ಪ ಜೆ, ಸಹಾಯಕ ಪ್ರಾಧ್ಯಾಪಕರಾದ ಡಾ. ಅವಿನಾಶ್ ಪಾಂಡುರಂಗ, ವಿಭಾಗದ ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಇದ್ದರು.