ರಾಷ್ಟ್ರೀಯ ಲೋಕ ಅದಾಲತ್‌: ೩೪,೩೨೦ ಪ್ರಕರಣಗಳು ಇತ್ಯರ್ಥ 

ಉಡುಪಿ, ನ.1೩- ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೆಶನದ ಮೇರೆಗೆ ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ನಿನ್ನೆ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 34,320 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿ 12,34,77,966ರೂ. ಪರಿಹಾರದ ಮೊತ್ತವನ್ನು ಘೋಷಿಸಲಾಯಿತು.

ರಾಷ್ಟ್ರೀಯ ಲೋಕ ಅದಾಲತ್ ಉದ್ಘಾಟಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಮಾತನಾಡಿ, ಲೋಕ ಅದಾಲತ್ನಲ್ಲಿ ಇತ್ಯರ್ಥ ವಾದ ಪ್ರಕರಣಗಳಿಗೆ ನ್ಯಾಯಾಲಯದ ಡಿಕ್ರಿ ದೊರೆತ ಬಳಿಕ  ಅನ್ಯ ಯಾವುದೇ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ.  ವರ್ಷಕ್ಕೆ 4ರಿಂದ 6ಬಾರಿ ಮೆಗಾ ಲೋಕ ಅದಾಲತ್ ದೇಶದಾದ್ಯಂತ ವಿವಿಧ ಕೋರ್ಟುಗಳಲ್ಲಿ ನಡೆಯುತ್ತಿದ್ದು ಕಕ್ಷಿದಾರರು ತಮ್ಮ ನಡುವಿನ ವೈಮನಸ್ಯ ಮರೆತು ಸೌಹಾರ್ದ ಜೀವನ ನಡೆಸಬೇಕು ಎಂದರು.

29 ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ, 268 ಚೆಕ್ಕು ಅಮಾನ್ಯ ಪ್ರಕರಣ, 21 ಬ್ಯಾಂಕ್/ಹಣ ವಸೂಲಾತಿ ಪ್ರಕರಣ, 86 ಎಂ.ವಿ.ಸಿ ಪ್ರಕರಣ, ಒಂದು ಕಾರ್ಮಿಕ ನಷ್ಟ ಪರಿಹಾರ ಪ್ರಕರಣ, 15 ಎಂ.ಎಂಆರ್‌ಡಿ ಆಕ್ಟ್ ಪ್ರಕರಣ, ಒಂದು ವೈವಾಹಿಕ ಪ್ರಕರಣ, 174 ಸಿವಿಲ್ ಪ್ರಕರಣ, 2538 ಇತರೇ ಕ್ರಿಮಿನಲ್ ಪ್ರಕರಣ ಹಾಗೂ 31187 ವ್ಯಾಜ್ಯ ಪೂರ್ವ ದಾವೆಗಳನ್ನು ಇತ್ಯರ್ಥ ಪಡಿಸಲಾಯಿತು. 4ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದಿದ್ದ ಎರಡೂ ದಾವೆಗಳನ್ನು ಈ ದಿನದ ಲೋಕ್ ಅದಾಲತ್ ಕಲಾಪದಲ್ಲಿ ಟೀನಾ ಪಿಂಟೋ ತನ್ನ ತಾಯಿ ಮತ್ತು ಸಹೋದರ ಮತ್ತು ಸಹೋದರಿ ಭೌತಿಕವಾಗಿ ಹಾಜರಾಗಿ ರಾಜಿ ಪತ್ರ ಸಲ್ಲಿಸಿ, ದಾವೆಯನ್ನು ರಾಜಿ ಮಾಡಿಕೊಂಡಿದ್ದಾರೆ. ದುಬೈನಲ್ಲಿರುವ ಸಹೋದರಿ ವರ್ಚು ವಲ್ ಮೋಡ್‌ನಲ್ಲಿ ಹಾಜರಾಗಿ ರಾಜಿ ಮಾಡಿಕೊಂಡಿ ರುವುದಾಗಿ ತಿಳಿಸಿದ್ದಾರೆ. ಹಾಗಾಗಿ ಒಂದೇ ಕುಟುಂಬದ ಎರಡು ದಾವೆಗಳು ಈ ದಿನದ ಲೋಕ ಅದಾಲತ್‌ನಲ್ಲಿ ಸುಖಾಂತ್ಯ ಕಂಡಿದೆ. ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ,  ವಕೀಲರ ಸಂಘ, ಉಡುಪಿ, ಕುಂದಾಪುರ ಹಾಗೂ ಕಾರ್ಕಳ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್, ಕಕ್ಷಿಗಾರರು ಹಾಗೂ ಇತರ ಸರಕಾರಿ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಲೋಕ್ ಅದಾಲತ್ ಯಶಸ್ವಿಗೊಂಡಿದೆ. ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್, ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದಿನೇಶ್ ಹೆಗ್ಡೆ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಮಾತನಾಡಿದರು. ಉಡುಪಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು.