ರಾಷ್ಟ್ರೀಯ ಲೋಕ ಅದಾಲತ್ ಮಾ. 16ಕ್ಕೆ ಮುಂದೂಡಿಕೆ

ಕಲಬುರಗಿ:ಮಾ.5:2024ನೇ ಸಾಲಿನ ಮೊದಲ ರಾಷ್ಟ್ರೀಯ ಲೋಕ ಅದಾಲತ್‍ವು 2024ರ ಮಾರ್ಚ್ 9ರ ಬದಲಾಗಿ ಮಾರ್ಚ್ 16 ರಂದು ನಡೆಯಲಿದೆ ಎಂದು ಕಲಬುರಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ್ ನವಲೆ ಅವರು ತಿಳಿಸಿದ್ದಾರೆ.

   ಈಗಾಗಲೇ ಕಲಬುರಗಿ ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೋಟೀಸ್ ನೀಡಿ ಮಾರ್ಚ್ 9 ರಂದು ರಾಜಿ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ತಿಳಿಸಲಾಗಿತ್ತು.  ಆದರೆ ಈಗ ಲೋಕ ಅದಾಲತ್ ದಿನಾಂಕದಲ್ಲಿ ಬದಲಾವಣೆಯಾದ ಪ್ರಯುಕ್ತ ನೋಟೀಸ್ ಪಡೆದವರು ಹಾಗೂ ಹಾಜರಾಗಲು ತಿಳಿಸಿದ ಪಕ್ಷಗಾರರು ಮಾರ್ಚ್ 16 ರಂದು ರಾಜಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಂಬಂಧಪಟ್ಟ ನ್ಯಾಯಾಲಯಗಳಿಗೆ ಬರಬೇಕು. 
  ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೋಷಕರಾದ ಗೌರವಾನ್ವಿತ ಎನ್.ವಿ. ಅಂಜಾರಿಯಾ ಅವರು ಮಾರ್ಚ್ 16 ರಂದು ಲೋಕ ಅದಾಲತ್ ನಡೆಸಲು ತೀರ್ಮಾನಿಸಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.