ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಪ್ರಕರಣಗಳ ಇತ್ಯರ್ಥ

ಧಾರವಾಡ,ಜು9 : ಉಚ್ಚ ನ್ಯಾಯಾಲಯ, ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್, ಹಿರಿಯ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡ ಪೀಠ, ಧಾರವಾಡ, ಇವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಏರ್ಪಡಿಸಲಾಗಿತ್ತು. ಅದಾಲತ್‍ನಲ್ಲಿ ಹಿರಿಯ ನ್ಯಾಯಮೂರ್ತಿಗಳೊಂದಿಗೆ ನ್ಯಾಯಮೂರ್ತಿಗಳಾದ ಎಸ್. ವಿಶ್ವಜಿತ್ ಶೆಟ್ಟಿ, ವಿ. ಶ್ರೀಶಾನಂದ, ಅನಿಲ ಬಿ ಕಟ್ಟೆ, ಮತ್ತು ವೆಂಕಟೇಶ ನಾಯ್ಕ ಟಿ. ಹಾಗೂ ಇವರೊಂದಿಗೆ ಲೋಕ ಅದಾಲತ್‍ನ ಸದಸ್ಯರುಗಳಾದ ಎಮ್. ಸಿ ಹುಕ್ಕೇರಿ, ಪ್ರಶಾಂತ ವಿ. ಮೊಗಳಿ, ವಿ. ಜಿ. ದಳವಾಯಿ, ಬಿ. ಎ. ಪಾಟೀಲ ಮತ್ತು ರಾಘವೇಂದ್ರ ಎ. ಪುರೋಹಿತ ಈ ರೀತಿಯಾಗಿ ಒಟ್ಟು ಪೀಠಗಳನ್ನು ಆಯೋಜಿಸಲಾಗಿತ್ತು. ಸದರಿ ಅದಾಲತನಲ್ಲಿ ಒಟ್ಟು 858 ಪ್ರಕರಣಗಳನ್ನು ವಿಚಾರಣೆಗೆಂದು ಗುರುತಿಸಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 375 ಪ್ರಕರಣಗಳನ್ನು 8,78,05,569/- ಮೊತ್ತಕ್ಕೆ ಇತ್ಯರ್ಥ ಪಡಿಸಲಾಯಿತು.
ಈ ಅದಾಲತ್ ನಲ್ಲಿ ಹಿರಿಯ ನ್ಯಾಯಮೂರ್ತಿಗಳಾದ ಎಸ್. ಜೆ. ಪಂಡಿತ್ ಹಾಗೂ ಸದಸ್ಯರಾದ ಎಮ್. ಸಿ. ಹುಕ್ಕೇರಿ ಇವರನ್ನು ಒಳಗೊಂಡ ಅದಲಾತ್ ಪೀಠವು ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 37 ವರ್ಷಗಳ ಹಳೆಯದಾದ ದಿವಾಣಿ ಪ್ರಕರಣವನ್ನು ವಕೀಲರುಗಳಾದ ಸಂಜಯ ಎಸ್. ಕಟಗೇರಿ ಮತ್ತು ಶ್ರೀಮತಿ ಸೋನಾ ವಕ್ಕುಂದ ಹಾಗೂ ಉಬಯ ಪಕ್ಷಗಾರರ ಜೊತೆಗೆ ರಾಜಿ- ಸಂಧಾನದೊಂದಿಗೆ ವ್ಯಾಜ್ಯವನ್ನು ಇತ್ಯರ್ಥಪಡಿಸಲಾಯಿತು.
ಅಲ್ಲದೆ ನ್ಯಾಯಾಮೂರ್ತಿಗಳಾದ ಅನಿಲ ಬಿ. ಕಟ್ಟಿ ಹಾಗೂ ಸದಸ್ಯರಾದ ಬಾಲಗೌಡ ಎ. ಪಾಟೀಲ. ಇವರನ್ನು ಒಳಗೊಂಡ ಲೋಕ ಅದಾಲತ್ ಪೀಠವು ಮುಖ್ಯವಾಗಿ ಕೌಟಂಬಿಕ ಕಲಹಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ದಂಪತಿಗಳನ್ನು ಒಂದು ಗೂಡಿಸಿ ಅವರಿಗೆ ಹೂವುಗುಚ್ಚ ನೀಡಿ ಸಿಹಿ ಹಂಚಿ ನಿಮ್ಮ ಮುಂದಿನ ದಾಂಪತ್ಯ ಜೀವನ ಸಿಹಿಯಾಗಿರಲ್ಲೆಂದು ಎಲ್ಲ ನ್ಯಾಯಮೂರ್ತಿಗಳು ಹಾರೈಸಿದರು. ಇದು ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್ ನ ಹೆಗ್ಗಳಿಕೆಯಾಗಿದೆ. ಇದರಿಂದ ಉಭಯ ಪಕ್ಷಗಾರರಿಗೆ ತುಂಬಾ ಅನುಕೂಲವಾಗಿದ್ದು ವ್ಯಾಜ್ಯ ಮುಕ್ತರಾಗಿರುತ್ತಾರೆ ಎಂದು ಅಧೀಕ ವಿಲೇಖನಾಧಿಕಾರಿಗಳು (ನ್ಯಾಯಾಂಗ) ಮತ್ತು ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಧಾರವಾಡ ಪೀಠದ ಕಾರ್ಯದರ್ಶಿಗಳಾದ ವೆಂಕಟೇಶ ಆರ್ ಹುಲಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.