
ಬೀದರ್:ಮಾ.3: ಬಸವಾದಿ ಶರಣರ ಕಾರ್ಯಕ್ಷೇತ್ರವಾದ ಬಸವಕಲ್ಯಾಣದಲ್ಲಿ ಮಾ. 4 ಮತ್ತು 5 ರಂದು ಹಮ್ಮಿಕೊಳ್ಳಲಾದ ಪ್ರಥಮ ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದ್ದಾರೆ.
ಇಳಕಲ್‍ನ ಮಹಾಂತ ಶಿವಯೋಗಿಗಳ ಹೆಸರಲ್ಲಿ ಸುಂದರ ಮಹಾ ವೇದಿಕೆ, ಗದಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೆಸರಲ್ಲಿ ಮಹಾ ಮಂಟಪ ನಿರ್ಮಿಸಲಾಗಿದೆ. ಸಭಾ ಭವನಕ್ಕೆ ಡಾ. ಚನ್ನಬಸವ ಪಟ್ಟದ್ದೇವರು, ಮಹಾದ್ವಾರಕ್ಕೆ ಜಗದ್ಗುರು ಡಾ.ಮಾತೆ ಮಹಾದೇವಿ ಹಾಗೂ ದಾಸೋಹ ಮಂಟಪಕ್ಕೆ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಹೆಸರು ಇಡಲಾಗಿದೆ ಎಂದು ಹೇಳಿದ್ದಾರೆ.
ಅಧಿವೇಶನ ರಾಜಕೀಯೇತರವಾಗಿದ್ದು, ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸರ್ವ ಸಮುದಾಯಗಳ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಜಿಲ್ಲೆ, ರಾಜ್ಯ ಹಾಗೂ ದೇಶದಾದ್ಯಂತ ಅಧಿವೇಶನದ ಪ್ರಚಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅಧಿವೇಶನದಲ್ಲಿ ಪಾಲ್ಗೊಳ್ಳುವವರಿಗೆ ಒಟ್ಟು 25 ಸಾವಿರ ಆಸನಗಳನ್ನು ಹಾಕಲಾಗಿದೆ. ಒಂದು ಸಾವಿರ ಸ್ವಯಂ ಸೇವಕರು ಅಧಿವೇಶನದ ವ್ಯವಸ್ಥೆ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳ 200 ಮಠಾಧೀಶರು ಹಾಗೂ ಲಕ್ಷಕ್ಕೂ ಅಧಿಕ ಲಿಂಗಾಯತರು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಅಧಿವೇಶನಕ್ಕೆ ಬರುವವರಿಗೆ ಬಸವಕಲ್ಯಾಣ ನಗರದ ಅನುಭವ ಮಂಟಪ, ಆಶ್ರಮ, ಮಠ, ಕಲ್ಯಾಣ ಮಂಟಪ, ಶಾಲಾ, ಕಾಲೇಜುಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಭೋಜನಕ್ಕೆ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳು ಎರಡು ದಿನಗಳ ಅಧಿವೇಶನಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಬಸವಕಲ್ಯಾಣಕ್ಕೆ ಬಂದು ಹೋಗುವ ಲಿಂಗಾಯತರಿಗೆ 200 ಬಸ್‍ಗಳ ಉಚಿತ ಸೇವೆ ಒದಗಿಸಲಿವೆ ಎಂದು ತಿಳಿಸಿದ್ದಾರೆ.
ಬಸವಕಲ್ಯಾಣ ನಗರ ಅಧಿವೇಶನಕ್ಕೆ ಸಜ್ಜುಗೊಂಡಿದೆ. ಬಸವಕಲ್ಯಾಣ, ಬೀದರ್ ಸೇರಿ ಜಿಲ್ಲೆಯಾದ್ಯಂತ ಅಧಿವೇಶನಕ್ಕೆ ಸ್ವಾಗತ ಕೋರುವ ಕಟೌಟ್, ಬ್ಯಾನರ್‍ಗಳು ರಾರಾಜಿಸುತ್ತಿವೆ. ಬಸವಣ್ಣನವರ ಟಾವರ್ ಕಟೌಟ್‍ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.
ಭವ್ಯ ಪಥ ಸಂಚಲನ
ಶನಿವಾರ ಬೆಳಿಗ್ಗೆ 9ಕ್ಕೆ ಬಸವಕಲ್ಯಾಣದ ಪರುಷ ಕಟ್ಟೆಯಲ್ಲಿ ಪೂಜೆ, ಪ್ರಾರ್ಥನೆ ಬಳಿಕ ಅಧಿವೇಶನದ ಸರ್ವಾಧ್ಯಕ್ಷ ಗೋ.ರು. ಚನ್ನಬಸಪ್ಪ ಅವರ ನೇತೃತ್ವದಲ್ಲಿ ಅಲ್ಲಿಂದ ತೇರು ಮೈದಾನದವರೆಗೆ ಭವ್ಯ ಪಥ ಸಂಚಲನ ನಡೆಯಲಿದೆ.
ಹೂವಿನಿಂದ ಅಲಂಕೃತ ರಥದಲ್ಲಿ ಬಸವಣ್ಣನವರ ಭಾವಚಿತ್ರ ಹಾಗೂ ವಚನ ಸಾಹಿತ್ಯ ಇರಲಿದೆ. ಮಠಾಧೀಶರು, ಗಣ್ಯರು, ಸಾಹಿತಿಗಳು, ಮುಖಂಡರು ಹಾಗೂ ಲಿಂಗಾಯತರು ಪಾಲ್ಗೊಳ್ಳಲಿದ್ದಾರೆ.
ಅಂದು ಬೆಳಿಗ್ಗೆ 10.30ಕ್ಕೆ ತೇರು ಮೈದಾನದಲ್ಲಿ ಶತಾಯುಷಿ ವಿ. ಸಿದ್ಧರಾಮಣ್ಣ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ಬೆಳಿಗ್ಗೆ 11ಕ್ಕೆ ಅಧಿವೇಶನದ ಉದ್ಘಾಟನಾ ಸಮಾರಂಭ ಜರುಗಲಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದ್ದಾರೆ.