ರಾಷ್ಟ್ರೀಯ ಮೌಲ್ಯಮಾಪನ ಮಂಡಳಿಯಿಂದ ಬಿಎಲ್‍ಡಿಇ ಸಂಸ್ಥೆಗೆ “ಎ” ಗ್ರೇಡ್

ವಿಜಯಪುರ, ನ.20-ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯಿಂದ “ಎ” ಗ್ರೇಡ್ ಮಾನ್ಯತೆ ದೊರೆತಿದೆ ಎಂದು ಬಿ.ಎಲ್.ಡಿ.ಇ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಕಳೆದ ದಿ.11 ರಿಂದ 13ರವರೆಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ಓಂಂಅ) ಸದಸ್ಯರು, ಇಲ್ಲಿನ ಮೂಲಭೂತ ಸೌಕರ್ಯಗಳು, ಪಠ್ಯಕ್ರಮ ಮತ್ತು ಅದರ ಅನುಷ್ಠಾನ, ಬೋಧನೆ ಮತ್ತು ಕಲಿಕೆಯ ವಿಧಾನಗಳು, ವಿದ್ಯಾರ್ಥಿಗಳು ಕಲಿಕೆಯಲ್ಲಿ ಪಾಲ್ಗೊಳ್ಳುವಿಕೆ ಹಾಗೂ ಸೇವೆಗಳು, ಆಡಳಿತ, ಸಂಶೋಧನಾ ಚಟುವಟಿಕೆಗಳು ಒಳಗೊಂಡಂತೆ ಇತರೆ ದಾಖಲೆಗಳನ್ನು ಆಳವಾಗಿ ಮೌಲ್ಯಮಾಪನ ಮಾಡಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಸ್ಥೆ ಸಲ್ಲಿಸಿದ ಸೇವೆಗಳನ್ನು ಪರಿಗಣಿಸಿ, ನಮ್ಮ ವಿಶ್ವವಿದ್ಯಾಲಯಕ್ಕೆ “ಎ” ಗ್ರೇಡ್ ನೀಡಲಾಗಿದೆ.
ಅಲ್ಲದೇ ಜೆರಿಯಾಟ್ರಿಕ್ ಕ್ಲಿನಿಕ್‍ನ ಸೇವೆಗಳು, ವಿಶ್ವವಿದ್ಯಾನಿಲಯದಲ್ಲಿ ಅಭಿವೃದ್ಧಿಪಡಿಸಿದ ಕ್ಯೂಆರ್ ಕೋಡ್ ವ್ಯವಸ್ಥೆ ಮತ್ತು ಡಿ.ಡಿ.ಆರ್.ಸಿ ಬಗ್ಗೆ ನ್ಯಾಕ್ ತಂಡ ಹೆಚ್ಚಿನ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ಹಿಂದೆ “ಬಿ” ಗ್ರೇಡ್ ಹೊಂದಿದ್ದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ “ಎ” ಗ್ರೇಡ್ ಗೆ ಮಾನ್ಯತೆ ಹೊಂದಿರುವುದು ಸಂತಸ ತಂದಿದ್ದು, ಇದಕ್ಕಾಗಿ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಆರ್.ಎಸ್.ಮುಧೋಳ, ಡೀನ್ ಡಾ.ಅರವಿಂದ ಪಾಟೀಲ ಸೇರಿದಂತೆ ವಿಶ್ವವಿದ್ಯಾಲಯ, ಕಾಲೇಜು ಹಾಗೂ ಆಸ್ಪತ್ರೆಯ ಎಲ್ಲ ಸಿಬ್ಬಂದಿಗೆ ಎಂ.ಬಿ.ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.
ಬಿ.ಎಲ್.ಡಿ.ಇ ಆಸ್ಪತ್ರೆ ಕೂಡ ಎನ್.ಎ.ಬಿ.ಎಚ್ ಮಾನ್ಯತೆಗೆ ಪ್ರವೇಶಾತಿ ದೊರೆತಿದ್ದು, ಇದರಿಂದ ಆಸ್ಪತ್ರೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಆರೋಗ್ಯ ಯೋಜನೆಗಳು ಮತ್ತು ಇನ್ಶುರೇನ್ಸ್ ಕಂಪನಿಗಳ ಸೇವೆಗಳು ರೋಗಿಗಳಿಗೆ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ.
ಅಲ್ಲದೇ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜಿನ ಪ್ರಥಮ ಎಂ.ಬಿ.ಬಿ.ಎಸ್ ತರಗತಿಗೆ ಈಗಿರುವ 150 ವಿದ್ಯಾರ್ಥಿಗಳ ಪ್ರವೇಶಾತಿಯನ್ನು 200 ಕ್ಕೆ ಹೆಚ್ಚಿಸಲು ಅನುಮೋದಿಸಿದ್ದಾರೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.