ರಾಷ್ಟ್ರೀಯ ಮೆಗಾ ಲೋಕ್ ಅದಾಲತ್: 26362 ಪ್ರಕರಣ ಇತ್ಯರ್ಥ, 11.92 ಕೋಟಿ ರೂ. ಮೊತ್ತ ಪಾವತಿಗೆ ಆದೇಶ

ಕಲಬುರಗಿ:ಮಾ.27: ರಾಷ್ಟ್ರೀಯ ಮೆಗಾ ಲೋಕ್ ಅದಾಲತ್ ಅಂಗವಾಗಿ ಶನಿವಾರ ಕಲಬುರಗಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ 26362 ಪ್ರಕರಣಗಳನ್ನು ಇತ್ಯರ್ಥಪಡಿಸಿ 11.92 ಕೋಟಿ ರೂ. ಮೊತ್ತ ಸಂತ್ರಸ್ತರಿಗೆ ಪಾವತಿಸುವಂತೆ ಜನತಾ ಅದಾಲತ್ ಆದೇಶಿಸಿದೆ.
ಲೋಕ ಅದಾಲತ್ ಅಂಗವಾಗಿ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಜೆ.ಸತೀಷ ಸಿಂಗ್ ಅವರು ಪ್ರಕರಣಗಳನ್ನು ಕಕ್ಷಿದಾರರು ಮತ್ತು ಅವರ ವಕೀಲರ ಸಮಕ್ಷಮ ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡಿದರು. ಅದರಂತೆ ಇತರೆ ನ್ಯಾಯಾಲಯಗಳಲ್ಲಿ ಅಲ್ಲಿನ ನ್ಯಾಯಾಧೀಶರು ಮೆಗಾ ಲೋಕ್ ಅದಾಲಕ್ ನಡೆಸಿ ಪ್ರಕರಣಗಳಿಎ ಇತಿಶ್ರೀ ಹಾಡಿದರು.
ಶನಿವಾರದ ಮೆಗಾ ಲೋಕ್ ಅದಾಲತ್‍ನಲ್ಲಿ ಸಿವಿಲ್ ದಾವೆಗಳು, ಮೋಟಾರು ವಾಹನ, ಅಪಘಾತ ಪರಿಹಾರ ಪ್ರಕರಣಗಳು, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು, ಭೂಸ್ವಾಧೀನ ಪರಿಹಾರ ವಸೂಲಾತಿ ಪ್ರಕರಣಗಳು, ಬ್ಯಾಂಕ್‍ಗಳಿಗೆ ಸಂಬಂಧಿಸಿದ ವ್ಯಾಜ್ಯಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟಾರೆ 26362 ಪ್ರಕರಣಗಳು ಇತ್ಯರ್ಥಗೊಂಡು 11,92,31,709 ರೂ. ಪರಿಹಾರ ಮೊತ್ತ ಸಂತ್ರಸ್ತರಿಗೆ ಪಾವತಿಸುವಂತೆ ಅದಾಲತ್ ಆದೇಶಿಸಿತು.
ಜಿಲ್ಲೆಯಲ್ಲಿ ಕಕ್ಷಿದಾರರು ಮತ್ತು ವಕೀಲರ ಸಹಕಾರದಿಂದ ಜನತಾ ಅದಾಲತ್ ಅಭೂತಪೂರ್ವ ಯಶಸ್ವಿಯಾಗಿ ನಡೆದಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಜೆ.ಸತೋಷ ಸಿಂಗ್ ಮತ್ತು ಸದಸ್ಯ ಕಾರ್ಯದರ್ಶಿ ಜಿ.ಆರ್.ಶೆಟ್ಟರ್ ಅವರು ಸಂತಸ ವ್ಯಕ್ತಪಡಿಸಿದರು.