ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಎಸ್ಪಿಗೆ ನೋಟೀಸ್

ಚಿತ್ರದುರ್ಗ, ಸೆ.1: ಡಾ.ಶಿವಮೂರ್ತಿ ಮುರುಘಾ ಶರಣರ ಮೇಲೆ ಪೋಕ್ಸೋ ಕಾಯ್ದೆಯಡಿ ಲೈಂಗಿಕ ಕಿರುಕುಳ ದೂರು ದಾಖಲಾಗಿ 7 ದಿನ ಕಳೆದಿದ್ದು ಏನು ಕ್ರಮ ಕೈಗೊಂಡಿದ್ದಿರಿ ಎಂದು ಕೇಳಿ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಕೆ.ಪರಶುರಾಮ್ ಅವರಿಗೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ನೋಟಿಸ್ ನೀಡಿದೆ.ಮುರುಘಾ ಮಠದ ಪೀಠಧಿಪತಿಗಳಾದ ಡಾ.ಶಿವಮೂರ್ತಿ ಮುರುಘಾ ಶರಣರ ಮೇಲೆ ಕಳೆದ ಶುಕ್ರವಾರ ಮೈಸೂರಿನಲ್ಲಿ ಪೋಕ್ಸೋ ಕೇಸು ದಾಖಲಾಗಿ, ಅದರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಚಿತ್ರದುರ್ಗ ಜಿಲ್ಲಾ ಪೊಲೀಸರಿಗೆ ವರ್ಗಾವಣೆ ಮಾಡಲಾಗಿತ್ತು. ನಂತರ ಈ ಕೇಸನ್ನು ಕೈಗೆತ್ತಿಕೊಂಡ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಕೆ.ಪರಶುರಾಮ್ ಪ್ರಕರಣವನ್ನು ಡಿವೈಎಸ್ ಪಿ ಅನಿಲ್ ಕುಮಾರ್ ಅವರಿಗೆ ತನಿಖೆ ನಡೆಸುವಂತೆ ವಹಿಸಿತು. ಅದರಂತೆ ಕ್ರಮ ಕೈಗೊಂಡು ಸಂತ್ರಸ್ತ ಬಾಲಕಿಯರನ್ನು ಐದಾರು ಭಾರೀ ವಿಚಾರಣೆಗೆ ಒಳಪಡಿಸಿದ ಪೊಲೀಸರು, ಡಾ.ಮುರುಘಾ ಶರಣರನ್ನು ಒಂದು ಭಾರೀಯೂ ವಿಚಾರಣೆ ಮಾಡಿಲ್ಲ. ಇದರಿಂದ ಆಕ್ರೋಶಗೊಂಡ ವಿವಿಧ ಸಂಘಟನೆಗಳು ಪೊಲೀಸ್ ಇಲಾಖೆ ಹಾಗೂ ಸರ್ಕಾರದ ವಿರುದ್ದ ಪ್ರತಿಭಟನೆಗಳನ್ನು ಮಾಡಿದ್ದರು. ಇದನ್ನೆಲ್ಲ ಗಮನಿಸಿದ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಸುಮೊಟೊ ಕೇಸ್ ದಾಖಲಿಸಿಕೊಂಡು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಕೆ.ಪರಶುರಾಮ್ ಅವರಿಗೆ ಬುಧವಾರ ನೋಟಿಸ್ ನೀಡುವ ಮೂಲಕ ಕಳೆದ 7 ದಿನಗಳ ಹಿಂದೆ ಪ್ರಕರಣ ದಾಖಲಾಗಿದ್ದು, ಇಲ್ಲಿಯವರೆಗೂ ಏನು ಕ್ರಮ ಕೈಗೊಂಡಿದ್ದಿರಾ ಎಂಬುದು ಸೇರಿದಂತೆ ಒಂಭತ್ತು ಪ್ರಶ್ನೆ ಕೇಳಿ 7 ದಿನದಲ್ಲಿ ಉತ್ತರಿಸುವಂತೆ ಸೂಚನೆ ನೀಡಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆ.ಪರಶುರಾಮ್ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಯಾವುದೇ ನೋಟಿಸ್ ಇನ್ನೂ ರಿಸೀವ್ ಆಗಿಲ್ಲ ಎಂದು ತಿಳಿಸಿದ್ದಾರೆ.ಆದರೆ ಮತ್ತೊಂದೆಡೆ ಮುರುಘಾ ಮಠದಲ್ಲೇ ಪೊಲೀಸರು ಬಿಡಾರ್ ಹೂಡಿದ್ದು, ಮಠದ ನಾಲ್ಕು ಗೇಟ್ ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದು, ಮಠದ ಒಳ ಹಾಗೂ ಹೊರ ಹೋಗುವ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ.