ರಾಷ್ಟ್ರೀಯ ಭಾವೈಕತೆ ಮೇರವಣಿಗೆಗೆ ಹೆಚ್ಚುವರಿ ಎಸ್ಪಿ ಮೇಘಣ್ಣನವರ್ ಚಾಲನೆ

ಬೀದರ : ಜು.19:ಸೋಮವಾರ ನಗರದ ಹೈದ್ರಾಬಾದ ರಸ್ತೆಯಲ್ಲಿರುವ ಕರ್ನಾಟಕ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ವಿವಿಧ ರಾಜ್ಯಗಳ ಜಾನಪದ ಕಲಾ ತಂಡಗಳಿಂದ ಜರುಗಿದ ರಾಷ್ಟ್ರೀಯ ಭಾವೈಕ್ಯತೆ ಮೆರವಣಿಗೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ದೇಶದ ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕೋಮು ಸಾಮರಸ್ಯ ಸಾಧಿಸಲು, ಕೋಮು ಗಲಭೆಗಳು ತಡೆಯಲು, ಕಲೆ, ಸಾಹಿತ್ಯ ಹಾಗೂ ಸಂಸ್ಕøತಿಯ ಆದಾನ-ಪ್ರದಾನ ಅಗತ್ಯವಿದ್ದು ಸಾಮಾಜಿಕ ಸ್ವಾಸ್ತ್ಯ ಹಾಗೂ ದೇಶದ ಪರಂಪರೆ ರಕ್ಷಿಸುವಲ್ಲಿ ಕಲಾವಿದರ ಪಾತ್ರ ಬಹಳಷ್ಟಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ, ನಾಡಿನ ಮುಕಟಪ್ರಾಯ ಗಡಿ ಜಿಲ್ಲೆ ಬೀದರಿಗೆ ಕಾಶ್ಮೀರದಿಂದ ಕನ್ಯಾ ಕುಮಾರಿ ವರೆಗಿನ ಸುಮಾರು 9 ರಾಜ್ಯಗಳಿಂದ ವಿವಿಧ ಕಲಾ ತಂಡಗಳು ಆಗಮಿಸಿ ಜಿಲ್ಲೆಯ ಜನಮಾನಸಕ್ಕೆ ತಮ್ಮ ಕಲಾಪ್ರೌಡಿಮೆ ಪ್ರದರ್ಶಿಸುತ್ತಿರುವುದು ಅಭಿಮಾನದ ಸಂಗತಿಯಾಗಿದ್ದು ಇಲ್ಲಿಯ ಕಲಾವಿದರಿಗೆ ಅಂತರರಾಜ್ಯ ಮಟ್ಟದಲ್ಲಿ ಕೊಂಡೊಯುತ್ತಿರುವ ರಾಷ್ಟ್ರೀಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆಯವರ ಪರಿಶ್ರಮ ಮೆಚ್ಚುವಂತ್ಥದ್ದು ಎಂದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆಯವರು, ರಾಷ್ಟ್ರದಲ್ಲಿ ಬೀದರ ಜಿಲ್ಲೆಯ ಕಲಾವಿದರ ಹೆಸರು ಮುಂಚುಣಿಗೆ ಬರಲು ಹಾಗೂ ಅಂತರ್ ರಾಜ್ಯ ಮಟ್ಟದ ಜಾನಪದ ಸಮ್ಮೇಳನಗಳಲ್ಲಿ ಭಾಗವಹಿಸಲು ಹಾಗೂ ಕಲಾವಿದರಿಗೆ ಕೇಂದ್ರ ಸರ್ಕಾರದಿಂದ ಮಾಶಾಸನ ಕೊಡಿಸಲು ಕಾರಣರಾದ ರಾಜಕುಮಾರ ಹೆಬ್ಬಾಳೆಯವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಚಂದ್ರಕಾಂತ ಶೆಟಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ. ಎಮ.ಎಸ್. ಚಲುವಾ, ಗಣೇಶಪುರದ ಓಂ ಸಾಯಿ ಗ್ರಾಮೀಣಾಭೀವೃದ್ಧಿ ಸಂಸ್ಥೆಯ ಅಧ್ಯಕ್ಷ ಶಿವಶರಣಪ್ಪ ಗಣೇಶಪುರ ಹಾಗೂ ಇತರರು ವೇದಿಕೆಯಲ್ಲಿದ್ದರು.
ಆರಂಭದಲ್ಲಿ ಕಾಲೇಜಿನ ಉಪನ್ಯಾಸಕಿ ಮಾನಾ ಸಂಗೀತಾ ಕಾರ್ಯಕ್ರಮ ನಿರೂಪಿಸಿದರು. ಕಾಶ್ಮೀರ, ಪಜಾಂಬ, ಹರಿಯಾಣ, ಛತ್ತಿಸಗಡ್, ಮಹಾರಾಷ್ಟ್ರ, ತೆಲಗಾಂಣ ಸೇರಿದಂತೆ ದೇಶದ ಸುಮಾರು 9 ರಾಜ್ಯಗಳ 150ಕ್ಕೂ ಅಧಿಕ ಕಲಾವಿದರು ಕಾರ್ಯಕ್ರಮದಲ್ಲಿದ್ದರು.
ಕರ್ನಾಟಕ ಕಾಲೇಜಿನಿಂದ ಆರಂಭವಾದ ಈ ರಾಷ್ಟ್ರೀಯ ಭಾವೈಕತಾ ಮೇರವಣಿಗೆಯು ಬಸವೇಶ್ವರ ವೃತ್ತ, ಮಹಾವೀರ ಸರ್ಕಲ್, ಶಿವಾಜಿ ಚೌಕ್, ಹರಳಯ್ಯ ವೃತ್ತ, ರೋಟರಿ ಸರ್ಕಲ ಮೂಲಕ ರಂಗಮಂದಿರ ತಲುಪಿತು.