ರಾಷ್ಟ್ರೀಯ ಪ್ಲೂರೋಸಿಸಿ ತಡೆ, ನಿಯಂತ್ರಣ ಕಾರ್ಯಕ್ರಮ

ಕೆ.ಆರ್.ಪೇಟೆ. ನ.05:- ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಪ್ಲೋರೈಡ್ ಅಂಶ ಇದ್ದರೆ ಪ್ಲೋರೋಸಿಸಿ ಕಾಯಿಲೆ ಉಂಟಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಸೂಕ್ತ ಅರಿವು ಹೊಂದುವುದು ಅವಶ್ಯಕ ಎಂದು ಜಿಲ್ಲಾ ಫ್ಲೂರೋಸಿಸಿ ನಿಯಂತ್ರಣಾಧಿಕಾರಿ ಡಾ.ದಿವಾಕರ್ ತಿಳಿಸಿದರು.
ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ರಾಯಸಮುದ್ರ ಗ್ರಾಮದಲ್ಲಿ ರಾಷ್ಟ್ರೀಯ ಪ್ಲೂರೋಸಿಸಿ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.
ಮಾನವನಿಗೆ ನೀರು ಅತೀ ಅಗತ್ಯವಾದ ಅಂಶವಾಗಿದ್ದು ಪ್ರತಿದಿನ ಶುದ್ದವಾದ ನೀರನ್ನು ಕುಡಿಯುವುದು ಅವಶ್ಯಕವಾಗಿದ್ದು. ಪ್ಲೋರೈಡ್ ಯುಕ್ತ ನೀರನ್ನು ಸೇವನೆ ಮಾಡುವುದರಿಂದ ಹಲವು ಕಾಯಿಲೆಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಕುಡಿಯುವ ನೀರನ್ನು ಆಗಾಗ್ಗೆ ಪರೀಕ್ಷಿಸಿ ಪ್ಲೋರೈಡ್ ಇಲ್ಲವೆಂದು ಖಚಿತಪಡಿಸಿಕೊಂಡ ನಂತರ ಆ ನೀರನ್ನು ಸೇವನೆ ಮಾಡಬೇಕು. ಪ್ಲೋರೋಸಿಸ್ ಲಕ್ಷಣಗಳೆಂದರೆ ಹೊಟ್ಟೆ ತೊಳೆಸಿದಂತಾಗುವುದು, ವಾಂತಿ, ಹಸಿವಿನ ಶಕ್ತಿ ಇಲ್ಲದಂತಾಗುವುದು. ಹೊಟ್ಟೆನೋವು, ಹೊಟ್ಟೆ ಉಬ್ಬರ, ಹಲ್ಲುಗಳು ಹಳದಿ/ಕಂದು, ಹೆಚ್ಚು ಮೂತ್ರ ವಿಸರ್ಜಿಸುವುದು ಹಾಗೂ ಸ್ನಾಯುಗಳು ಮತ್ತು ಕೀಲುಗಳಲ್ಲಿ ವಿಪರೀತ ನೋವು ಬರುವುದು.
ಸಿ ಅನ್ನಾಂಗ ಹೆಚ್ಚಿರುವ ನಿಂಬೆ, ನೆಲ್ಲಿಕಾಯಿ, ಕಿತ್ತಳೆ, ಮೋಸಂಬಿ, ಸೀಬೆಹಣ್ಣುಗಳನ್ನು ಆಹಾರದಲ್ಲಿ ಸೇವಿಸುವುದು, ಕ್ಯಾಲ್ಸಿಯಂ ಹೆಚ್ಚಿರುವ ಪದಾರ್ಥಗಳಾದ ಹಾಲು, ಬೆಲ್ಲ, ಹಸಿರು ಸೊಪ್ಪು, ತರಕಾರಿಗಳು, ರಾಗಿ ಮುಂತಾದ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಪ್ಲೋರೈಡ್ ಮುಕ್ತ ನೀರು ಬಳಕೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ದಂತಭಾಗ್ಯ ನೋಡಲ್ ಅಧಿಕಾರಿ ಡಾ.ಅರುಣಾನಂದ ದಂತಬಾಗ್ಯದ ಬಗ್ಗೆ ತಿಳಿಸಿ ದಂತ ಮತ್ತು ಮೂಳೆಯೇತರ ಫ್ಲೂರೋಸಿಸ್ ಕಾಯಿಲೆಯು ಪ್ರಮುಖವಾಗಿ ನೀರಿನಿಂದ ಬರುತ್ತಿದ್ದು ತಮ್ಮ ಜಮೀನುಗಳ ಬಳಿ ಕೊರೆಯಿಸಿಕೊಂಡಿರುವ ಕೊಳವೆಬಾವಿ ಮಾಲೀಕರು ಕಡ್ಡಾಯವಾಗಿ ತಮ್ಮ ನೀರನ್ನು ಪರೀಕ್ಷಿಸಿ ಧೃಢಪಡಿಸಿಕೊಂಡ ನಂತರ ಕುಡಿಯಲು ಬಳಸಬೇಕು. ಇಲ್ಲವಾದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿನ ನೀರನ್ನು ಬಳಸಬೇಕು. ಈ ದಂತ ಪ್ಲೂರೋಸಿಸ್ ಮಕ್ಕಳ ಹಲ್ಲುಗಳಲ್ಲಿ ಬಿಳಿಮಚ್ಚೆಯ ರೂಪದಲ್ಲಿ ಕಾಣಿಸುತ್ತದೆ. ನಂತರ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಮಾನವನಿಗೆ ಹಲ್ಲುಗಳ ಸಮಸ್ಯೆ ಎದುರಾಗುತ್ತದೆ. ರಕ್ತಹೀನತೆ, ಮಲಬದ್ದತೆ,ಸೇರಿದಂತೆ ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ಇವುಗಳನ್ನು ನಿಯಂತ್ರಿಸಬೇಕಾದರೆ ಹುಳಿ ಹಣ್ಣುಗಳ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಅದರಲ್ಲೂ 45 ವರ್ಷ ಮೀರಿದವರಿಗೆ ಸರ್ಕಾರವೇ ಉಚಿತ ದಂತದ ಸೆಟ್‍ಗಳನ್ನು ನೀಡುತ್ತದೆ.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥರಾದ ಡಾ.ಎ.ರವಿ. ಹರಳಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾದ್ಯಕ್ಷ ಆರ್.ಕೆ.ಯೋಗೇಶ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಉಮಾದೇವಿ, ಚಂದ್ರು, ನಾಗಮ್ಮ, ಶೋಭ, ಗ್ರಾಮದ ಮುಖಂಡ ಮೂಡ್ಲಿಗೌಡ ಹಾಗೂ ಸಮುದಾಯ ಆರೋಗ್ಯಾಧಿಕಾರಿ ದಿವ್ಯ, ಪ್ರಾಥಮಿಕ ಸುರಕ್ಷಾ ಅಧಿಕಾರಿ ಜಯಶೀಲ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಗ್ರಾಮದ ನಾಗರೀಕರು ಹಾಜರಿದ್ದರು.