ರಾಷ್ಟ್ರೀಯ ಪ್ರಜ್ಞೆ ಬೋಧಿಸಿದ ಯುವಕರ ಕಣ್ಮಣಿ

ಮಾನ್ವಿ,ಜ.೧೨- ಸ್ವಾಮಿ ವಿವೇಕಾನಂದರು ಯುವಕರಲ್ಲಿ ದೇಶಪ್ರೇಮ, ಮಾನವೀಯತೆ, ಸಹೋದರತ್ವ ಹಾಗೂ ರಾಷ್ಟ್ರೀಯ ಪ್ರಜ್ಞೆ ಬೋಧಿಸಿದ ಭಾರತ ಕಂಡ ಶ್ರೇಷ್ಠ ವಾಗ್ಮಿ, ಯುವಕರ ಕಣ್ಮಣಿಯಾಗಿದ್ದಾರೆ ಎಂದು ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.
ಅವರು ಪಟ್ಟಣದ ಕಲ್ಮಠ ಪದವಿ ಪೂರ್ವ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕದ ವತಿಯಿಂದ ಆಯೋಜಿಸಿದ್ದ, ಸಿಡಲ ನುಡಿಗಳ ಸಂತ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೀನರೂ, ದುಃಖಿಗಳೇ ನಿಜವಾದ ದೇವರು. ಮೊದಲು ಅವರನ್ನು ಪೂಜಿಸು ಎಂದು ಹಸಿದವರ ಪರವಾಗಿ ಮಾತನಾಡಿದ ಮಹಾನ್ ಹೃದಯವಂತ ಸ್ವಾಮಿ ವಿವೇಕಾನಂದರು.
ಭಾವಗಳಿಗೂ ಸ್ನಾಯುಜಾಲಕ್ಕೂ ಒಂದು ಸಂಬಂಧವನ್ನುಂಟು ಮಾಡುವುದೇ ವಿದ್ಯಾಭ್ಯಾಸ ಎಂದು ಸಾರಿದ ಸ್ವಾಮಿ ವಿವೇಕಾನಂದರು ದೈಹಿಕ ಮತ್ತು ಬೌದ್ಧಿಕ ಶಿಕ್ಷಣಕ್ಕೆ ಮಹತ್ವ ನೀಡಿ, ಶಿಕ್ಷಣದ ಜೊತೆಗೆ ಸಂಸ್ಕಾರ ಮುಖ್ಯವೆಂದು ಸಾರಿದರು. ನಿಮ್ಮ ಏಳ್ಗಿಗೆ ನೀವೇ ಶಿಲ್ಪಿಗಳೆಂದು ಯುವಕರಲ್ಲಿ ಆತ್ಮವಿಶ್ವಾಸ ಮೂಡಿಸಿದ ಸ್ವಾಮಿ ವಿವೇಕಾನಂದರು ಶ್ರೇಷ್ಠ ಆಧ್ಯಾತ್ಮಿಕ ಚಿಂತಕರು ಹೌದು ಎಂದು ಯಾಳಗಿ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಎಸ್‌ಎಸ್. ಪಾಟೀಲ್ ಅವರು ಮಾತನಾಡಿ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ವಿಚಾರಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಏಕಾಗ್ರತೆಯಿಂದ, ಆತ್ಮವಿಶ್ವಾಸದೊಂದಿಗೆ ಅಧ್ಯಯನದಲ್ಲಿ ತೊಡಗಿ ಮುಂದಿನ ಭವಿಷ್ಯವನ್ನು ಸುಂದರವಾಗಿ ಕಟ್ಟಿಕೊಂಡು ಹೆತ್ತವರಿಗೂ, ತಾವು ಕಲಿತ ಶಿಕ್ಷಣ ಸಂಸ್ಥೆಗೂ ಕೀರ್ತಿ ತರುವಂತವರಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು .
ಉಪನ್ಯಾಸಕ ವೀರಭದ್ರ ಗೌಡ, ವಿದ್ಯಾರ್ಥಿ ರೇಣುಕಾರಾಜ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಅಬ್ದುಲ್ ಬೇಗ್, ಅಭಿನವ ಹಿರೇಮಠ, ಉಪಸ್ಥಿತರಿದ್ದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ನರಸಣ್ಣ ಸುಂಕೇಶ್ವರ ಕಾರ್ಯಕ್ರಮ ನಿರೂಪಿಸಿದರು, ಉಪನ್ಯಾಸಕ ಮಾರ್ಟಿನ್ ಸ್ವಾಗತಿಸಿದರು, ಉಪನ್ಯಾಸಕ ಆನಂದಕುಮಾರ ವಂದಿಸಿದರು.