ರಾಷ್ಟ್ರೀಯ ಪಕ್ಷ ತಿರಸ್ಕರಿಸಿ ಜೆಡಿಎಸ್‌ಗೆ ಅಧಿಕಾರ ನೀಡಿ: ನಜ್ಮಾ ನಜೀರ್ ಕರೆ

ಬಾಬಯ್ಯ ದರ್ಗಾದಲ್ಲಿ ತಾಲೂಕು ಮಟ್ಟದ ಅಲ್ಪಸಂಖ್ಯಾತರ ಸಮಾವೇಶ
ದೇವದುರ್ಗ. ಸೆ.೧೨- ದೇಶ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸಿರುವ ಕಾಂಗ್ರೆಸ್ ಹಿಂದಿನಿಂದ ಚೂರಿ ಹಾಕುವ ಕೆಲಸ ಮಾಡಿದೆ. ಹಾಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ತಿರಸ್ಕಾರ ಮಾಡಿ ಸರ್ವಜಾತಿಯ ಉದ್ದಾರಕ್ಕಾಗಿ ದೀನದಲಿತರ ಅಭಿವೃದ್ಧಿಗಾಗಿ ಬಡವರ ರಕ್ಷಣೆಗಾಗಿ, ರೈತರ ಹಿತಕ್ಕಾಗಿ ಜಾತ್ಯಾತೀತ ಮನೋಭಾವದ ಜಾತ್ಯಾತೀತ ಜನತಾ ದಳ ಪಕ್ಷಕ್ಕೆ ಅಧಿಕಾರ ನೀಡಿ ಎಂದು ಅಲ್ಪ ಸಂಖ್ಯಾತರ ಸಮಾಜದ ರಾಜ್ಯ ವಕ್ತಾರೆ ನಜ್ಮಾ ನಜೀರ್ ಕರೆ ನೀಡಿದರು.
ತಾಲೂಕಿನ ಮಸರಕಲ್ ಗ್ರಾಮದ ಹೊರ ವಲಯದ ಬಾಬಯ್ಯ ನ ದರ್ಗಾದಲ್ಲಿ ನಡೆದ ತಾಲೂಕು ಮಟ್ಟದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಭಾನುವಾರ ಮಾತನಾಡಿದರು. ಜೆಡಿಎಸ್ ಅಪೌಷ್ಟಿಕತೆಯ ಆಪಾದನೆಯ ಹಣೆಪಟ್ಟಿಯನ್ನು ಕಿತ್ತಿಹಾಕಿ ನವ ದೇವದುರ್ಗದ ನಿರ್ಮಾಣಕ್ಕಾಗಿ ಕಂಕಣ ಬದ್ಧರಾಗಿ ನಿಮ್ಮೆಲ್ಲರ ಮನೆಮಗಳಾಗಿ ದುಡಿಯಲು ಸಿದ್ದಳಾಗಿರುವ ಕರೆಮ್ಮ.ಜಿ ನಾಯಕ ಅವರನ್ನು ಮುಂದಿನ ಚುನಾವಣೆ ಕ್ಷೇತ್ರದಿಂದ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಇದುವರೆಗೂ ನಮ್ಮ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ತನ್ನ ಮತ ಬ್ಯಾಂಕಿನ ಪರಿವರ್ತನೆ ಅಲ್ಪಸಂಖ್ಯಾತರನ್ನು ದುರ್ಬಳಕೆ ಮಾಡಿಕೊಂಡಿದೆ. ವಿನಃ ನಮ್ಮ ಸಮಾಜದ ಪ್ರಮುಖರನ್ನು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೇಮಿಸದೆ ಹಾಗೂ ಉನ್ನತವಾದ ಸ್ಥಾನವನ್ನು ನೀಡದೆ ನಮ್ಮ ಸಮಾಜವನ್ನು ಕಡೆಗಣಿರುವ ಕಾಂಗ್ರೆಸ್ ಪಕ್ಷಕ್ಕೆ ಯಾವ ನೈತಿಕತೆಯಿಂದ ನಮ್ಮ ಮತ ಕೇಳುತ್ತಿದೆ. ಅಲ್ಪಸಂಖ್ಯಾತರು ಕಾಂಗ್ರೆಸ್ ಪರವಾಗಿದ್ದಾರೆ ಎಂದು ಹೇಳಲು ನಾಚಿಕೆಯಾಗುವುದಿಲ್ಲವೇ ಎಂದು ಪಕ್ಷದ ನಡೆಯನ್ನು ವ್ಯಂಗ್ಯವಾಡಿದರು.
ಇನ್ನು ಕಾಂಗ್ರೆಸ್ ನಡೆ ಒಂದು ಕಡೆಯಾದರೆ ಇನ್ನು ಕೇಂದ್ರ ಮತ್ತು ರಾಜ್ಯದ ಅಧಿಕಾರದಲ್ಲಿರುವ ಬಿಜೆಪಿ ದೇಶದಲ್ಲಿ ಕೋಮುವಾದ ವಿಷದ ಬೀಜ ಬಿತ್ತುತ್ತಿದೆ. ಆ ವಿಷದಬೀಜ ಪಟ್ಟಣ ಬಿಟ್ಟು ಗ್ರಾಮಾಂತರ ಪ್ರದೇಶಕ್ಕೆ ಬರುವ ಮುಂಚೆ ಅದನ್ನು ಬುಡ ಸಮೇತ ಕಿತ್ತು ಹಾಕಲು ಎಲ್ಲಾರೂ ದೃಢವಾದ ಸಂಕಲ್ಪ ಮಾಡಬೇಕು. ಇಲ್ಲವಾದರೆ ನಮ್ಮ ಗ್ರಾಮಗಳಲ್ಲಿ ಆಜು ಬಾಜಿನ ಮನೆಯವರಲ್ಲಿ ಅಣ್ಣ ತಮ್ಮಂದಿರಂತೆ ಬದುಕುವ ನಮ್ಮೆಲ್ಲರ ಮಧ್ಯೆ ಕೋಮುವಾದದ ಬೀಜಬಿತ್ತಿ ನಮ್ಮೆಲ್ಲರನ್ನು ಹಾಳು ಮಾಡುವ ಮುಂಚೆ ನಾವೆಲ್ಲರೂ ಜಾಗೃತರಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯಧ್ಯಕ್ಷ ಎಂ.ಎನ್.ನಬೀ , ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ವಕ್ತಾರ ಅಕ್ಬರ್ ಹುಸೇನ್, ಲಿಂಗಸುಗೂರಿನ ಸಿದ್ದು ಬಂಡಿ, ರಾಯಚೂರು ಗ್ರಾಮೀಣ ಕ್ಷೇತ್ರದ ರವಿ ಪಾಟೀಲ್, ಎನ್ ರವಿಶಂಕರ ವಕೀಲ, ಜಿಲ್ಲಾ ಉಪಾಧ್ಯಕ್ಷ ಅಮರೇಶ ಪಾಟೀಲ್, ಜೆಡಿಎಸ್ ತಾಲೂಕ್ ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಗಲ್, ಶರಣಪ್ಪ ಬಳೆ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಮಯೂರಸ್ವಾಮಿ, ಅಲ್ಪಸಂಖ್ಯಾತರ ಘಟಕದ ತಾಲೂಕ ಅಧ್ಯಕ್ಷ ಇಸಾಕ್ ಮೇಸ್ತ್ರಿ ರಾಮದುರ್ಗ, ಯುವ ಘಟಕದ ಅಧ್ಯಕ್ಷ ವೆಂಕಟೇಶ್ ಕೊತ್ತದೊಡ್ಡಿ, ದಾವುದ್ ಔಂಟಿ, ಗೋಕುಲ್ ಬೋವಾಜಿ, ಇಬ್ರಾಹಿಂ, ಸೂರಯ್ಯ ಬಾನು ಸೇರಿದಂತೆ ಜೆಡಿಎಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.