
ಕೋಲಾರ,ಮಾ,೨-ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರ ನಡೆಸಿದ ರಾಷ್ಟ್ರೀಯ ಪಕ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಡಾ.ರಮೇಶ್ ಬಾಬು ಆರೋಪಿಸಿದರು.
ಬೇತಮಂಗಲ ಗಂಗಮ್ಮ ದೇಗುಲ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡಿ ಮಾತನಾಡಿದ ಅವರು, ಕೆಜಿಎಫ್ ತಾಲ್ಲೂಕಿನಲ್ಲಿ ೧೦ ವರ್ಷ ಕಾಲ ಬಿಜೆಪಿ ಶಾಸಕರು ಹಾಗೂ ೫ ವರ್ಷ ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ಯಾವುದೇ ಶಾಶ್ವತ ಅಭಿವೃದ್ಧಿ ಕಾಮಗಾರಿಗಳು ಕೈಗೊಂಡಿಲ್ಲವೆಂದು ದೂರಿದರು.
ತಾಲ್ಲೂಕಿನ ಯಾವುದೇ ಗ್ರಾಮಗಳಿಗೂ ಭೇಟಿ ನೀಡಿದರು, ಗ್ರಾಮಸ್ಥರು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ, ಶಾಸಕಿ ರೂಪಕಲಾ ಶಶಿಧರ್ ಡಿಸಿಸಿ ಬ್ಯಾಂಕಿನಿಂದ ಸಾಲ ನೀಡಿ ಸಾಲಗಾರರನ್ನಾಗಿ ಮಾಡಿದ್ದಾರೆ, ಪ್ರತಿ ವಾರ ಸಾಲ ಕಟ್ಟಲು ಮಹಿಳೆಯರು ಮನೆಯಲ್ಲಿ ಪರದಾಟ ನಡೆಸುತ್ತಾರೆಂದರು.
ನುಡಿದಂತೆ ನಡೆಯುವ ಎಚ್‌ಡಿಕೆ
ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯ ಮಂತ್ರಿಯಾದ ೨ ಬಾರಿಯೂ ನುಡಿದಂತೆ ನಡೆಯುವ ಮೂಲಕ ರಾಜ್ಯದ ಜನತೆಯ ನಂಬಿಕೆ ಗಳಿಸಿದ್ದಾರೆ, ಈ ಬಾರಿಯೂ ರಾಜ್ಯದ ಜನತೆ ಬಹುಮತ ಸರ್ಕಾರ ರಚನೆ ಮಾಡಲು ಅವಕಾಶ ನೀಡಿದ್ದಾರೆ. ರೈತರ ಸಾಲ, ಡಿಸಿಸಿ ಬ್ಯಾಂಕಿನ ಮಹಿಳೆಯರ ಸಾಲ, ಸ್ರೀ ಸಬಲೀಕರಣ, ಉನ್ನತ ಶಿಕ್ಷಣ ಸೇರಿದಂತೆ ಅನೇಕ ಯೋಜನಗಳನ್ನು ಜಾರಿಗೆ ತರಲಿದ್ದಾರೆಂದರು.
ಇತ್ತೀಚೆಗೆ ಪ್ರಸಿದ್ದ ಬಂಗಾರು ತಿರುಪತಿಯಲ್ಲಿ ಭರತ ಹುಣ್ಣಿಯ ಪ್ರಯುಕ್ತ ನಾಟಕ ಪ್ರದರ್ಶನಕ್ಕೆ ಸಹಕಾರ ನೀಡಿದ ಹಿನ್ನಲೆ ನಾಟಕ ಮಂಡಳಿಯ ಸದಸ್ಯರು ಜೆಡಿಎಸ್ ಅಭ್ಯರ್ಥಿ ಡಾ.ರಮೇಶ್ ಬಾಬುರನ್ನು ಸನ್ಮಾನಿಸಿ, ಮುಂದಿನ ದಿನಗಳಲ್ಲಿ ತಮ್ಮ ಜತೆಗೆ ಇರುವುದಾಗಿ ಭರವಸೆ ನೀಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಮನೋಹರ್ ರೆಡ್ಡಿ, ಗ್ರಾಪಂ ಸದಸ್ಯ ಮಂಜುನಾಥ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಗ್ರಾಪಂ ಸದಸ್ಯರಾದ ಶ್ರೀನಿವಾಸ್, ಪ್ರೀಯ ಧರಣಿ, ಮುಖಂಡರಾದ ಎಂಬಿಕೆ ಕೃಷ್ಣಪ್ಪ, ರಾಜಣ್ಣ, ಅನಂದ್ ರೆಡ್ಡಿ ಇದ್ದರು.