ರಾಷ್ಟ್ರೀಯ ಡೆಂಗ್ಯು ದಿನ ಆಚರಣೆ

ಕಲಬುರಗಿ.ಮೇ.16:ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ NVBDCP ಕಾರ್ಯ ಕ್ರಮದಡಿ “ಡೇಂಗಿ ತಡೆಗಟ್ಟುವಿಕೆ ಮನೆಯಿಂದಲೇ ಪ್ರಾರಂಭ” ಎಂಬ ಘೋಷವಾಕ್ಯದೊಂದಿಗೆ ರವಿವಾರ ಕಲಬುರಗಿಯಲ್ಲಿ ರಾಷ್ಟ್ರೀಯ ಡೆಂಗ್ಯು ದಿನ (National Dengue Day) ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿಗಳಾದ ಡಾ. ಬಸವರಾಜ ಗುಳಗಿ ಮಾತನಾಡಿ , ಇಂದು ಭಾರತದ ಎಲ್ಲಾ ರಾಜ್ಯಗಳಲ್ಲಿ ರಾಷ್ಟ್ರೀಯ ಡೆಂಗ್ಯು ದಿನ ಆಚರಣೆ ಮಾಡಲಾಗುತ್ತಿದೆ. ಎಲ್ಲರೂ ಡೆಂಗ್ಯು ಜ್ವರ ಬರದ ಹಾಗೆ ನೋಡಿಕೊಳ್ಳಬೇಕು ಎಂದರು.

ಜಿಲ್ಲಾ ಸಮಾಲೋಚಕರಾದ ಕರ್ಣಿಕ ಕೋರೆ ಮಾತನಾಡಿ ಡೆಂಗ್ಯು ರೋಗವು ಈಡೀಸ್ ಈಜಿಪ್ತಿ ಸೊಳ್ಳೆಗಳು ಕಚ್ಚುವುದರಿಂದ ಬರುತ್ತದೆ. ಜ್ವರ ಬಂದ ಕೂಡಲೇ ರಕ್ತ ತಪಾಸಣೆ ಮಾಡಿಸಬೇಕು.
ಡೆಂಗ್ಯು ಜ್ವರದ ಕುರಿತು ಯಾರೂ ನಿರ್ಲಕ್ಷ್ಯ ಮಾಡಬಾರದು.ಮನೆಯ ಸುತ್ತಮುತ್ತಲೂ ಕಲುಷಿತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ವಾರಕ್ಕೊಮ್ಮೆ ನೀರು ಖಾಲಿ ಮಾಡಿ ಒಣಗಿಸಿ ಮತ್ತೆ ನೀರು ತುಂಬಬೇಕು. ಯಾವಾಗಲೂ ಮೈತುಂಬ ಬಟ್ಟೆ ಧರಿಸಬೇಕು, ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು. ಮನೆಯ ಕಿಟಕಿ-ಬಾಗಿಲುಗಳಿಗೆ ಜಾಲಿಗಳನ್ನು ಅಳವಡಿಸುವ ಮೂಲಕ ಸೊಳ್ಳೆಗಳಿಂದ ರಕ್ಷಣೆ ಪಡೆಯಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.