ರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್ ಶಿಪ್ ಸ್ಪರ್ಧೆ

ವಿಜಯಪುರ,ಅ.೧೨- ಯಾವುದೇ ಮನುಷ್ಯ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿದ್ದಲ್ಲಿ ಆತನ ಕುಟುಂಬವು ಸದೃಢವಾಗಿರುತ್ತದೆ ಹಾಗೂ ಆತ್ಮವಿಶ್ವಾಸದಿಂದ ತುಂಬಿರುತ್ತದೆ ಎಂದು ಪಟ್ಟಣದ ವಾರಿಯರ್ಸ್ ಟೆಕ್ವಾಂಡೋ ಅಕಾಡೆಮಿಯ ಸಂಸ್ಥಾಪಕರಾದ ಮುನೀಂದ್ರ ತಿಳಿಸಿದರು.
ಅವರು ಇಲ್ಲಿನ ಪರಿವೀಕ್ಷಣ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಹಾಗೂ ಭಾನುವಾರಗಳಂದು ನಡೆಯಲಿರುವ ಮೊದಲ ವರ್ಷದ ರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್ಶಿಪ್-೨೦೨೩ ಕಾರ್ಯಕ್ರಮದ ಅಂಗವಾಗಿ ಮಾತನಾಡುತ್ತಿದ್ದರು.
ಆಗಸ್ಟ್ ೧೨ರ ಶನಿವಾರ ಹಾಗೂ ೧೩ರ ಭಾನುವಾರ ಎರಡು ದಿನಗಳ ಕಾಲ ಕೋಲಾರ ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ಕನ್ವೆನ್ಷನ್ ಹಾಲ್‌ನಲ್ಲಿ ಏರ್ಪಡಿಸಲಾಗಿರುವ ಮೊದಲ ವರ್ಷದ ರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್ಶಿಪ್ ಕಾರ್ಯಕ್ರಮದಲ್ಲಿ ರಾಷ್ಟ್ರದ ಏಳು ರಾಜ್ಯಗಳಿಂದ ಪಂಜಾಬ್, ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳ್ ನಾಡು, ಕರ್ನಾಟಕ ಪ್ರದೇಶಗಳಿಂದ ಸುಮಾರು ೬೦೦ಕ್ಕೂ ಹೆಚ್ಚು ಮಂದಿ ನಾಲ್ಕು ಹಂತಗಳ ಕರಾಟೆ ಚಾಂಪಿಯನ್ಶಿಪ್‌ನಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಟೆಕ್ವಾಂಡೋ ಕಾರ್ಯದರ್ಶಿ ಹಾಗೂ ರಾಜ್ಯ ಜಂಟಿ ಕಾರ್ಯದರ್ಶಿಯಾಗಿರುವ ನಾರಾಯಣಸ್ವಾಮಿ ಮಾತನಾಡಿ ರಾಜ್ಯದ ಶಿಕ್ಷಣದಲ್ಲಿ ದೈಹಿಕ ಶಿಕ್ಷಣಕ್ಕೂ ಹೆಚ್ಚಿನ ಮಹತ್ವ ನೀಡಬೇಕೆಂಬ ನೀತಿ ರೂಪಿಸಿದ್ದರು ಸಹ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಅಂಕ ಪಡೆಯುವ ಪಠ್ಯಪುಸ್ತಕಗಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು ದೈಹಿಕವಾಗಿ ಸದೃಢರಾಗಲು ಹಾಗೂ ಹೆಣ್ಣು ಮಕ್ಕಳು ಮಾನಸಿಕವಾಗಿ ಆತ್ಮವಿಶ್ವಾಸ ಗಳಿಸಿಕೊಳ್ಳಲು ಬೇಕಾದಂತಹ ದೈಹಿಕ ಶಿಕ್ಷಣ ನೀಡಲಾಗುತ್ತಿಲ್ಲವೆಂದು ಖೇದ ವ್ಯಕ್ತಪಡಿಸಿದರು.
ಶನಿವಾರ ಬೆಳಗ್ಗೆ ೧೦ ಗಂಟೆಗೆ ಶ್ರೀ ಅನ್ನಪೂರ್ಣೇಶ್ವರಿ ಕನ್ವೆನ್ಷನ್ ಹಾಲ್ನಲ್ಲಿ ಹೊಸಕೋಟೆ ಶಿವನಪುರದ ವಹ್ನಿಕುಲ ಕ್ಷತ್ರಿಯರ ಗುರುಪೀಠಾಧ್ಯಕ್ಷರಾದ ಶ್ರೀ ಪ್ರಣವಾನಂದಪುರಿ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಯಲಹಂಕ ಶಾಸಕರಾದ ಎಸ್ ಆರ್ ವಿಶ್ವನಾಥ್, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಪುಟ್ಟು ಆಂಜನಪ್ಪ, ಬಿವಿಕೆ ಕೃಷ್ಣಪ್ಪ, ಓಬದೇನಹಳ್ಳಿ ಮುನಿಯಪ್ಪ, ಎಂ ರವೀಶ್ ಕುಮಾರ್, ಹೂಡಿ ವಿಜಯ್ ಕುಮಾರ್, ಚೇತನ ಗೌಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಕಾರ್ಯಕ್ರಮದಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾದ ಮಂಚನಬೆಲೆ ಕೆ ಶ್ರೀನಿವಾಸ್ ಹಾಗೂ ಗ್ರಾಂಡ್ ಮಾಸ್ಟರ್ ವಿ ಶ್ರೀನಿವಾಸಲು ಮತ್ತು ಹಿರಿಯ ಕರಾಟೆ ಶಿಕ್ಷಕರಾದ ಆರ್.ಮುನಿ ರಾಜು, ಎನ್ ನಂಜುಂಡಪ್ಪ ರವರುಗಳನ್ನು ಸನ್ಮಾನಿಸಲಾಗುವುದು.
ಈ ಸಂದರ್ಭದಲ್ಲಿ ವಾರಿಯರ್ ಟೆಕ್ವಾಂಡೋ ಅಕಾಡೆಮಿಯ ಸಹ ಶಿಕ್ಷಕರುಗಳಾದ ಧನುಷ್, ಅನಂತ್, ಶಾಂತಕುಮಾರ್, ಹರೀಶ್, ವಿನೋದ್, ರಮೇಶ್ ರವರುಗಳು ಉಪಸ್ಥಿತರಿದ್ದರು.