ರಾಷ್ಟ್ರೀಯ ಜಾನಪದ ಸಮ್ಮೇಳನದಲ್ಲಿ ಕಲಾ ವೈಭವ ತವರೂರಾಗ ಕಾಶಿ ಕುಂತಾಳ ಹಡದವ್ವ

ಬೀದರ್: ಜು.11: `ಕಾಶಿಗೆ ಹೋಗಾಕ ಏಸೊಂದು ದಿನ ಬೇಕ, ತಾಸೊತ್ತಿನ ಹಾದಿ ತವರೀಗ, ತಾಸೊತ್ತಿನ ಹಾದಿ ತವರೂರಾಗ ಕಾಶಿ ಕುಂತಾಳ ಹಡದವ್ವ..’ ತಾಯಿಯನ್ನು ದೇವರೊಂದಿಗೆ ಹೋಲಿಸುವ ಗರತಿಯ ತವರಿನ ಪ್ರೀತಿಯನ್ನು ಹಾಡಿನ ಮೂಲಕ ಸಭಿಕರ ಮುಂದಿಟ್ಟವರು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ಶಂಭುಲಿಂಗ ಕಾಮಣ್ಣ.

ಕರ್ನಾಟಕ ಜಾನಪದ ಪರಿಷತ್ತು, ಕೇಂದ್ರದ ಸಂಸ್ಕøತಿ ಸಚಿವಾಲಯ, ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ತಂಜಾವೂರಿನ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಸಹಯೋಗದಲ್ಲಿ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕøತಿಕ ಭವನದಲ್ಲಿ ರಾಷ್ಟ್ರೀಯ ಜಾನಪದ ಸಮ್ಮೇಳನ ನಿಮಿತ್ತ ಸೋಮವಾರ ನಡೆದ ಗೋಷ್ಠಿಯಲ್ಲಿ ಜನಪದರಲ್ಲಿ ತಾಯಿ- ತವರು ಕುರಿತು ಅವರು ಉಪನ್ಯಾಸ ನೀಡಿದರು.

ಹೆಣ್ಣು ಮಕ್ಕಳಿಗೆ ತವರಿನ ಮೇಲಿರುವ ಪ್ರೀತಿ ಅನನ್ಯವಾದದು. ಈ ಪ್ರೀತಿಯನ್ನು ಜನಪದರು ಹಾಡುಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದ ಪ್ರೊ. ಶಂಭುಲಿಂಗ ಕಾಮಣ್ಣ, ಹಲವು ಹಾಡುಗಳ ಮೂಲಕ ಜನಪದರ ತವರು ಪ್ರೀತಿಯನ್ನು ತೆರೆದಿಟ್ಟರು.

ಕುಟುಂಬದ ಪರಿಕಲ್ಪನೆಯು ಆದಿಮಾನವನ ಕೊಡುಗೆ. ಅಲೆಮಾರಿಯಾಗಿದ್ದ ಆದಿಮಾನವ ಒಂದೆಡೆ ನೆಲೆನಿಂತಾಗ ಮನೆ ಬೇಕಾಗಿತ್ತು. ಸಂಬಂಧಗಳು ಬೇಕಾಗಿದ್ದವು. ಇವೆಲ್ಲವುದರ ಫಲವೇ ಕುಟುಂಬ ಎಂದು ಅವರು ವಿಶ್ಲೇಷಿಸಿದರು.

ಹೆಣ್ಣು ಮಕ್ಕಳಿಗೆ ಪತಿಯ ಮನೆಯಷ್ಟೇ ತವರೂ ಮುಖ್ಯ. ಎರಡೂ ಕುಟುಂಬಗಳ ಶ್ರೇಯಸ್ಸು, ಕೀರ್ತಿ ಬಯಸುವ ದೊಡ್ಡ ಮನಸ್ಸು ಅವರಲ್ಲಿರುತ್ತದೆ. ತವರು ಹಾಗೂ ಪತಿಯ ಮನೆಗಳೆರಡನ್ನೂ ಬೆಳೆಗಿಸುವ ಜ್ಯೋತಿ ಮಹಿಳೆ ಎಂದು ಬಣ್ಣಿಸಿದರು.

ಜನಪದರು ನಿರಕ್ಷರಿಯಾಗಿದ್ದರೂ ಅಕ್ಕರೆಯುಳ್ಳವರಾಗಿದ್ದರು. ಸಂಸ್ಕಾರವಂತರು, ನಿಷ್ಕಲ್ಮಷ ಮನಸ್ಸು ಅವರಲ್ಲಿತ್ತು. ಹೃದಯದಲ್ಲಿ ಪ್ರೀತಿ ತುಂಬಿಕೊಂಡಿರುತಿತ್ತು ಎಂದರು.

`ಕಣ್ಣು ಕಾಣುವವರೆಗೆ, ಬೆನ್ನು ಬಾಗುವವರೆಗೆ, ತಾಯಿಯ ತವರು ಎನಗಿರಲಿ’ ಎನ್ನುವ ಹಾಡು ಹೆಣ್ಣು ಮಕ್ಕಳಿಗೆ ತವರಿನ ಮೇಲಿರುವ ಪ್ರೀತಿಗೆ ಸಾಕ್ಷಿಯಾಗಿದೆ. ಇಂತಹ ನೂರಾರು ಹಾಡುಗಳಿವೆ. ಇವೆಲ್ಲವನ್ನು ಸಂಗ್ರಹಿಸಿ, ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಆಗಬೇಕಾಗಿದೆ ಎಂದರು.

ವಚನ ಮತ್ತು ಜಾನಪದ ಕುರಿತು ಉಪನ್ಯಾಸ ನೀಡಿದ ದೆಹಲಿಯ ಜೆಎನ್‍ಯು ಕನ್ನಡ ಪೀಠದ ಅಧ್ಯಕ್ಷ ಪ್ರೊ. ವಿಶ್ವನಾಥ್ ಅವರು, ಜಾನಪದ ಸಾಹಿತ್ಯದಲ್ಲಿನ ಮಾನವೀಯ ಮೌಲ್ಯಗಳನ್ನು ಕೊಂಡಾಡಿದರು. ಹಂಚಿ ಉಣ್ಣುವ ಗುಣ, ಆದರಾತಿಥ್ಯ, ಪರಸ್ಪರ ಪ್ರೀತಿ- ವಿಶ್ವಾಸ ಮುಂತಾದವುಗಳನ್ನು ಜನಪದರಲ್ಲಿ, ಶರಣರ ವಚನಗಳಲ್ಲಿ ಕಾಣಬಹುದು ಎಂದರು. ಜನಪದರು ಕೂಡಿ ಬಾಳುವುದನ್ನು ಕಲಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಆಶಯ ಭಾಷಣ ಮಾಡಿದ ನಿವೃತ್ತ ಪ್ರಾಚಾರ್ಯ ಪ್ರೊ. ಚಂದ್ರಶೇಖರ ಬಿರಾದಾರ್, ಜನಪದರು ಅನಕ್ಷರಸ್ಥರಾಗಿದ್ದರೂ ಅಜ್ಞಾನಿಗಳಾಗಿರಲಿಲ್ಲ. ರಾಶಿ ರಾಶಿ ಸಾಹಿತ್ಯ ರಚಿಸಿದ್ದಾರೆ. ಅವರಿಂದ ಕಲಿಬೇಕಾಗಿರುವುದು ಬಹಳಷ್ಟಿದೆ. ಹಾಡು, ಕಲೆ, ನೃತ್ಯ ಮುಂತಾದವುಗಳ ಮೂಲಕ ಬದುಕಿನ ಆನಂದ ಹೆಚ್ಚಿಸಿಕೊಂಡಿದ್ದರು ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಶಾಂತಕುಮಾರ ಪಾಟೀಲ್ ಮಾತನಾಡಿ, ಜಾನಪದ ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಡಾ. ಜಗನ್ನಾಥ ಹೆಬ್ಬಾಳೆ, ಡಾ. ರಾಜಕುಮಾರ ಹೆಬ್ಬಾಳೆ ನಡೆಸುತ್ತಿರುವ ಪ್ರಯತ್ನ ಅನುಕರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಭುಶೆಟ್ಟಿ ಮೂಲಗೆ ಅದ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಬಸವರಾಜ ಸ್ವಾಮಿ ನಿರೂಪಿಸಿದರು. ವಸಂತ ಹುಣುಸನಾಳೆ ಸ್ವಾಗತಿಸಿದರು. ಶಿವಕುಮಾರ ಸ್ವಾಮಿ ವಂದಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ, ಸಂಯೋಜಕ ರಾಜಕುಮಾರ ಹೆಬ್ಬಾಳೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಗೋಷ್ಠಿ ನಂತರ ಜನಪದ ಕಲಾ ಪ್ರರ್ದಶನ ನಡೆಯಿತು. ಉದ್ಯಮಿ ಕೆ. ಸತ್ಯಮೂರ್ತಿ ಉದ್ಘಾಟಿಸಿದರು. ಬಸವರಾಜ ಮೂಲಗೆ ಅತಿಥಿಯಾಗಿದ್ದರು. ಕೋಲಾಟ, ಚಕ್ರಿ ಭಜನೆ, ಭಜನೆ ಹಾಡು, ಹಲಗೆ ಕುಣಿತ ಮುಂತಾದವು ನಡೆದವು. ಜಾನಪದ ಝೇಂಕಾರ ಎಲ್ಲರನ್ನು ಮಂತ್ರಮುಗ್ಧಗೊಳಿಸಿತು.