ರಾಷ್ಟ್ರೀಯ ಜಾನಪದ ವಿಚಾರ ಸಂಕಿರಣ

ಕೋಲಾರ,ಮಾ.೧೩: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕೋಲಾರ, ದಕ್ಷಿಣ ಭಾರತೀಯ ಭಾಷೆಗಳ ಸಂಸ್ಥೆ ಕೇರಳ ಮತ್ತು ಯೋಗಿ ನಾರೇಯಣ ಮಠ ಕೈವಾರ ಇವರ ಸಹಯೋಗದಲ್ಲಿ -ಫಾಸಿಲ್ಸ್‌ನ ೨೯ನೆಯ ವಾರ್ಷಿಕ ಸಮಾವೇಶ ಮತ್ತು ರಾಷ್ಟ್ರೀಯ ಜಾನಪದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಕ ೧೩-೦೩-೨೦೨೩ ರಿಂದ ೧೫-೦೩-೨೦೨೩ ರವರೆಗೆ ಕೈವಾರ ಯೋಗಿ ನಾರೇಯಣ ಮಠದಲ್ಲಿ ನಡೆಸಲಾಗುತ್ತಿದೆ.
ಈ ರಾಷ್ಟ್ರೀಯ ಜಾನಪದ ವಿಚಾರ ಸಂಕಿರಣದಲ್ಲಿ ದಕ್ಷಿಣ ಭಾರತದ ಹಲವು ವಿಶ್ವವಿದ್ಯಾಲಯಗಳ ಜಾನಪದ ವಿದ್ವಾಂಸರು ಭಾಗವಹಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಸಂಶೋಧನೆಗೆ ಸಂಬಂಧಿಸಿದ ಪ್ರಬಂಧ ಮಂಡನೆ, ಉನ್ನತ ಸಂಶೋಧನೆ ಕುರಿತಾದ ಚರ್ಚೆ, ಜಾನಪದವನ್ನು ಪದವಿ ಕಾಲೇಜುಗಳಲ್ಲಿ ಪಠ್ಯವಾಗಿಸುವ ಕುರಿತಾದ ಚಿಂತನೆ ಇವೆಲ್ಲದರ ಗೋಷ್ಢಿಗಳು ನಡೆಯಲಿವೆ.
ಈ ಕಾರ್ಯಕ್ರಮದಲ್ಲಿ ತಮಿಳುನಾಡಿನ ತಂಜಾವೂರಿನ ಪ್ರೊ. ಅರು ರಾಮನಾಥನ್, ತಿರುಪತಿಯ ಪ್ರೊ.ಎನ್.ಭಕ್ತವತ್ಸಲರೆಡ್ಡಿ, ಪಾಂಡಿಚರಿಯ ಪ್ರೊ.ಸರಸ್ವತಿ ವೇಣುಗೋಪಾಲ್, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಟಿ.ಎಂ.ಭಾಸ್ಕರ್ ಅವರು ಈ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.
ಈ ವಿಚಾರ ಸಂಕಿರಣದಲ್ಲಿ ದಕ್ಷಿಣ ಭಾರತದ ಸುಮಾರು ೧೫೦ ಕ್ಕೂ ಹೆಚ್ಚು ವಿದ್ವಾಂಸರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಕಾರ್ಯದರ್ಶಿಗಳಾದ ಪ್ರೊ.ಎಂ.ಎನ್ ವೆಂಕಟೇಶ್ ಅವರು ಮತ್ತು ಡಾ.ನಾ.ಮುನಿರಾಜು ಎಲ್ಲದರ ಉಸ್ತುವಾರಿ ವಹಿಸಲಿದ್ದಾರೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ನಿರಂಜನ ವಾನಳ್ಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.