ರಾಷ್ಟ್ರೀಯ ಜಾನಪದ ಉತ್ಸವದಲ್ಲಿ ಮೊಳಗಿದ ಅಂತರ್ ರಾಜ್ಯ ಕಲಾ ವೈಭವ

ಬೀದರ್: ಜು.19:ಆಧುನಿಕರಣ, ಯಾಂತ್ರಿಕರಣ ಹಾಗೂ ಜಾಗತಿಕರಣದ ಇಂದಿನ ಸಂದರ್ಭದಲ್ಲಿ ಮಕ್ಕಳು ಟಿವಿ ಮತ್ತು ಮೊಬೈಲ್‍ಗಳಲ್ಲಿ ನಿರತರಾಗಿದ್ದಾರೆ. ನೇರವಾಗಿ ನಮ್ಮ ದೇಶದ ಜನಪದ ಸಂಸ್ಕøತಿಯನ್ನು ನೋಡದೆ, ಬರೀ ಪರದೆಯ ಮೇಲೆ ನೋಡುವಂತಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಕಾಲೇಜಿನ ಆಡಳಿತ ಮಂಡಳಿಯು ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಕಲಾವಿದರನ್ನು ಬೀದರ ಜಿಲ್ಲೆಗೆ ಕರೆಸಿ, ವಿದ್ಯಾರ್ಥಿಗಳಿಗೆ ಜನಪದ ಸಂಸ್ಕøತಿಯ ಕುರಿತು ಜ್ಞಾನ ನೀಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಶಿಲ್ಪಾ ಎಂ. ನುಡಿದರು.

ಸಂಸ್ಕøತಿ ಮಂತ್ರಾಲಯ ನವದೆಹಲಿ, ಕರ್ನಾಟಕ ಕಲಾ, ವಾಣಿಜ್ಯ ವಿಜ್ಞಾನ ಮಹಾವಿದ್ಯಾಲಯ, ಕನ್ನಡ ಸಾಹಿತ್ಯ ವಿಭಾಗ, ದಕ್ಷಿಣ ಮಧ್ಯ ವಲಯ ಸಾಂಸ್ಕøತಿಕ ಕೇಂದ್ರ ನಾಗಪುರ ಹಾಗೂ ಓಂಸಾಯಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಗಣೇಶಪುರ ಅವರುಗಳ ಸಂಯುಕ್ತಾಶ್ರಯದಲ್ಲಿ ನಗರದ ರಂಗಮಂದಿರದಲ್ಲಿ ನಡೆದ ರಾಷ್ಟ್ರೀಯ ಜನಪದ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಜನಪದ ಎಂಬುದು ಈ ದೇಶದ ನಿವಾಸಿಗಳ ಉಸಿರು. ನಡೆ-ನುಡಿ, ಆಚಾರ-ವಿಚಾರಗಳನ್ನು ಬಿಂಬಿಸುವ ಶ್ರೀಮಂತ ಪದ್ಧತಿ. ಎಂತಹ ಸನ್ನಿವೇಶದಲ್ಲೂ ಜನಪದ ಸಂಸ್ಕøತಿ ಇಲ್ಲದೆ ಜೀವನವಿಲ್ಲ. ಕಾಶ್ಮೀರ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಗಡಿಜಿಲ್ಲೆ ಬೀದರನಲ್ಲಿ ತಮ್ಮ ಸಂಸ್ಕøತಿಯನ್ನು ಬಿಂಬಿಸುವ ನೃತ್ಯ ಮಾಡುತ್ತಿರುವುದು ಐತಿಹಾಸಿಕ ಕ್ಷಣಗಳಾಗಿವೆ. ಎಲ್ಲರೂ ಪರಸ್ಪರ ಸಂಸ್ಕøತಿಯ ಕುರಿತು ತಿಳಿದುಕೊಳ್ಳಲು ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಇದು ಸಹಕಾರಿಯಾಗಿದೆ. ಯುವಕ-ಯುವತಿಯರು ಜನಪದ ಸಂಸ್ಕøತಿ ಕಡೆಗೆ ಹೆಚ್ಚು ವಾಲಬೇಕು. ತನ್ಮೂಲಕ ದೇಶಿ ಜನಪದ ಸಂಸ್ಕøತಿ ಉಳಿಸಲು ಶ್ರಮಿಸಬೇಕೆಂದು ಶಿಲ್ಪಾ ಎಂ. ಪ್ರತಿಪಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ “ಪಠ್ಯ ಚಟುವಟಿಕೆ ಜೊತೆಗೆ ಪಠ್ಯೇತರ ಚಟುವಟಿಕೆ, ದೇಶದ ನಾನಾ ಜನಪದ ದೇಶಿ ಸಂಸ್ಕøತಿ ಬಿಂಬಿಸುವ ಕಲಾಪ್ರಕಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಡಾ. ಜಗನ್ನಾಥ ಹೆಬ್ಬಾಳೆ ಹಾಗೂ ಡಾ. ರಾಜಕುಮಾರ ಹೆಬ್ಬಾಳೆ ಅವಿರತ ಶ್ರಮವಹಿಸುತ್ತಿದ್ದಾರೆ. ಭಾಂಗಡಾ, ರೂಫ್, ಲಾವಣಿ ಹಾಗೂ ಕಕ್ಷರ ನೃತ್ಯ ಸೇರಿದಂತೆ ಹಲವು ಪ್ರಕಾರದ ನೃತ್ಯಗಳು ಇಂದು ನೋಡಲು ಅವಕಾಶ ಲಭಿಸಿತು. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಸದಾ ಬೆನ್ನೆಲುಬಾಗಿ ಸಹಕಾರ ನೀಡುವೆ ಎಂದು ಅಭಯಹಸ್ತ ನೀಡಿದರು.

ಪ್ರಾಸ್ತಾವಿಕ ಮಾತನಾಡಿದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಗನ್ನಾಥ ಹೆಬ್ಬಾಳೆ “ಸುಮಾರು ಒಂದು ತಿಂಗಳಿನಿಂದ ವಿವಿಧ ರಾಜ್ಯಗಳ ಕಲಾವಿದರ ಆಗಮನಕ್ಕಾಗಿ ತಯಾರಿ ಮಾಡಲಾಗಿತ್ತು. ಕೊನೆಗೆ ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ಕಲಾವಿದರನ್ನು ಗಡಿ ಜಿಲ್ಲೆಗೆ ಕರೆಸಿ ವಿವಿಧ ಗ್ರಾಮ ಹಾಗೂ ತಾಲೂಕಾ ಮಟ್ಟಗಳಲ್ಲಿ ಕಲಾಪ್ರದರ್ಶನ ಮಾಡಿಸಲಾಯಿತು. ಕಾಲೇಜಿನ ವತಿಯಿಂದ ಆಯೋಜಿಸಿದ ಇಂದಿನ ಕಾರ್ಯಕ್ರಮಕ್ಕೆ ಸಹಕರಿಸಿದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಹಾಗೂ ಎಲ್ಲಾ ಆಡಳಿತ ಮಂಡಳಿ ಸದಸ್ಯರಿಗೂ ಮತ್ತು ಸಿಬ್ಬಂದಿ ವರ್ಗದವರಿಗೂ ಕೃತಜ್ಞತೆ ಸಲ್ಲಿಸುವೆ ಎಂದು ತಿಳಿಸಿದರು.

ಜನಪದ ನೃತ್ಯಗಳು: ಮಹಾರಾಷ್ಟ್ರದ ಲಾವಣಿ ನೃತ್ಯ, ಮಧ್ಯಪ್ರದೇಶದ ಬಧಾಯಿ ನೃತ್ಯ, ಓಡಿಸ್ಸಾದ ಶಂಖವಾದನ ನೃತ್ಯ, ಪಂಜಾಬನ ಭಾಂಗಡಾ ನೃತ್ಯ, ಜಮ್ಮು ಕಾಶ್ಮೀರದ ರೂಫ್ ನೃತ್ಯ, ಛತ್ತಿಸಗಢದ ಕಕ್ಷರ ನೃತ್ಯ, ಕರ್ನಾಟಕದ ಉಷಾ ಪ್ರಭಾಕರ ನೇತೃತ್ವದ ಜನಪದ ನೃತ್ಯ, ರಾಣಿ ಸತ್ಯಮೂರ್ತಿ ನೇತೃತ್ವದ ಭರತನಾಟ್ಯ ಮತ್ತು ಶೇಷಪ್ಪ ಚಿಟ್ಟಾ ನೇತೃತ್ವದ ಹಲಗೆ ಮತ್ತು ಗಾರುಡಿ ಬೊಂಬೆ ಕಲಾ ಪ್ರದರ್ಶನ, ಆಶಾಬಾಯಿ ನೇತೃತ್ವದ ಲಂಬಾಣಿ ನೃತ್ಯ, ಜಾನಪದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ದೇಶಿ ನೃತ್ಯ ಸಭೀಕರ ಗಮನ ಸೆಳೆಯಿತು. ಕಲಾವಿದರು ಸುಂದರವಾಗಿ ಕಲಾಪ್ರದರ್ಶನ ನಡೆಸಿಕೊಟ್ಟರು. ಕೊನೆಯಲ್ಲಿ ಎಲ್ಲಾ ಕಲಾವಿದರಿಗೂ ಸನ್ಮಾನಿಸಲಾಯಿತು.

ವೇದಿಕೆ ಮೇಲೆ ಕರಾಶಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಚಂದ್ರಕಾಂತ ಶೆಟಕಾರ, ಬಸವ ತತ್ವ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವೈಜಿನಾಥ ಕಮಠಾಣೆ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ, ಶಿವಶರಣಪ್ಪ ಗಣೇಶಪುರ ಸೇರಿದಂತೆ ಅನೇಕರಿದ್ದರು.

ಮಹಾರುದ್ರ ಡಾಕುಳಗೆ, ಡಾ. ಸಿರಾಜ್ ಮತ್ತು ಶಾದಾನ್ ಫಾತಿಮಾ ನಿರೂಪಿಸಿದರು. ಡಾ. ಎಂ.ಎಸ್.ಚಲ್ವಾ ಸ್ವಾಗತಿಸಿದರು. ಡಾ. ಸುನಿತಾ ಕೂಡ್ಲಿಕರ್ ವಂದಿಸಿದರು.