“ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ”


ಧಾರವಾಡ, ನ.9- ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಕೇಂದ್ರ ಕಾರಾಗೃಹದಲ್ಲಿ ಮಹಿಳಾ ಬಂಧಿಗಳಿಗೆ ಮತ್ತು ಅವರ ಜೊತೆಯಲ್ಲಿರುವ ಮಕ್ಕಳಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ, ಕೇಂದ್ರ ಕಾರಾಗೃಹ ಇಲಾಖೆ, ಧಾರವಾಡ ವಕೀಲರ ಸಂಘ ಹಾಗೂ ವಾರ್ತಾ ಮತ್ತು ಸಂಪರ್ಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಮೇಶ್ ಎಮ್. ಅಡಿಗ ಇವರು ನೇರವೇರಿಸಿ ಮಹಿಳೆಯರಿಗಾಗಿ ಮತ್ತು ಅವರ ಜೊತೆ ಇರುವ ಮಕ್ಕಳಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ಅರಿವು ಮತ್ತು ನೆರವು ನೀಡಲಾಗುತ್ತಿದ್ದು, ಮಹಿಳಾ ಬಂಧಿಗಳು ಅದರ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು 09/11/1995 ರಿಂದ ಆಚರಿಸುತ್ತಾ ಬಂದಿದ್ದು, ಪ್ರತಿಯೊಬ್ಬರಿಗೆ ಕಾನೂನು ಸೇವೆಗಳ ಬಗ್ಗೆ ಅರಿವು ಮೂಡಿಸುವದು ಮತ್ತು ಅಗತ್ಯ ಬಿದ್ದ ಮಹಿಳೆಯರಿಗೆ, ಮಕ್ಕಳಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ, ಕಾರಾಗೃಹದಲ್ಲಿರುವ ಬಂಧಿಗಳಿಗೆ, ಹಿರಿಯ ನಾಗರೀಕರಿಗೆ, ಸಾರ್ವಜನಿಕ ದೊಂಬಿಗಳಲ್ಲಿ ಅನ್ಯಾಯಕ್ಕೊಳಗಾದ ಸಂತ್ರಸ್ಥರಿಗೆ, ಲೈಂಗಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ಥರಿಗೆ ಹಾಗೂ ಬಡವರಿಗೆ ಅಂದರೆ, ವಾರ್ಷಿಕ ರೂ.5 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಸಾರ್ವಜನಿಕರಿಗೆ ಉಚಿತವಾಗಿ ಕಾನೂನಿನ ನೆರವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನೀಡಲಾಗುವುದೆಂದು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಧ್ಯೆಯೋದ್ದೇಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಕೈಗೊಂಡ ಅಭಿಯಾನವನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕೆಂದು ಹಾಗೂ ಕಾರಾಗೃಹದಿಂದ ಹೊರಗಡೆ ಹೋದ ನಂತರ ಉತ್ತಮ ಜೀವನವನ್ನು ಸಾಗಿಸಬೇಕೆಂದು ಕರೆ ಕೊಟ್ಟರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಿಣ್ಣನ್ನವರ್ ಆರ್.ಎಸ್. ಮಾತನಾಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಇಡೀ ರಾಜ್ಯದಲ್ಲಿಯೇ ವಿಶೇಷವಾಗಿ ಈ ದಿನ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಕೇಂದ್ರ ಕಾರಾಗೃಹದಲ್ಲಿ ಮಹಿಳಾ ಬಂಧಿಗಳಿಗೆ ಮತ್ತು ಅವರ ಮಕ್ಕಳಿಗೆ ಉಚಿತ ಕಾನೂನಿನ ನೆರವು ಅಭಿಯಾನವನ್ನು ಕೈಗೊಳ್ಳುವ ಮೂಲಕ ಆಚರಿಸಲಾಗುತ್ತಿದ್ದು, ಮಹಿಳಾ ಬಂಧಿಗಳು ನಿಸ್ಸಂಕೋಚವಾಗಿ ತಮ್ಮ ಕಾನೂನು ಸಮಸ್ಯೆಗಳನ್ನು, ಪ್ರಕರಣಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನಿಯೋಜನೆಗೊಂಡ ವಕೀಲರ ಜೊತೆ ಚರ್ಚಿಸಿ ಹೆಚ್ಚಿನ ಪ್ರಮಾಣದಲ್ಲಿ ಉಚಿತ ಕಾನೂನಿನ ನೆರವನ್ನು ಪಡೆಯುವಂತೆ ಕರೆ ಕೊಟ್ಟರು. ಯಾವದೋ ಕೆಟ್ಟ ಗಳಿಗೆಯಲ್ಲಿ ನಡೆದ ಘಟನೆಯಿಂದ ಕಾರಾಗೃಹಕ್ಕೆ ಬಂದಿದ್ದರೂ ಸಹಿತ, ಕಾರಾಗೃಹದಲ್ಲಿ ಉತ್ತಮ ನಡುವಳಿಕೆ ತೋರಿಸಿ, ಪಶ್ಚಾತಾಪ ಪಟ್ಟು ಕಾರಾಗೃಹದಲ್ಲಿ ಕೌಶಲ್ಯಯುತ ತರಬೇತಿಗಳ ಪ್ರಯೋಜನ ಪಡೆದು, ಶಿಕ್ಷೆ ಮುಗಿಸಿ ಹೊರಗೆ ಹೋಗಿ ತಮ್ಮ ಜೀವನವನ್ನು ಸುಖಮಯಗೊಳಿಸುವಂತೆ ಕರೆಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಕಾರಾಗೃಹದ ಅಧೀಕ್ಷಕ ಎಮ್.ಎ. ಮರಿಗೌಡ, ವಹಿಸಿಕೊಂಡು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದವರು ನೀಡುವ ಉಚಿತ ಕಾನೂನಿನ ಅರಿವು ಮತ್ತು ನೆರವನ್ನು ಸದುಪಯೋಗಪಡಿಸಿಕೊಳ್ಳಲು ಬಂಧಿಗಳಿಗೆ ಕರೆ ಕೊಟ್ಟರು. ಅದೂ ಅಲ್ಲದೆ, ಜಿಲ್ಲಾ ನ್ಯಾಯಾಲಯ ಮತ್ತು ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಇರುವ ಪ್ರಕರಣಗಳಲ್ಲಿ ಪ್ರಾಧಿಕಾರದಿಂದ ನೇಮಿಸಿದ ವಕೀಲರುಗಳು ಸಾಕಷ್ಟು ಶ್ರಮ ವಹಿಸಿ, ಸಾಕಷ್ಟು ಪ್ರಕರಣಗಳನ್ನು ಯಶಸ್ವಿಗೊಳಿಸಿದ್ದು, ಪ್ರಾಧಿಕಾರದ ಸೇವೆಯನ್ನು ಪಡೆಯುವಂತೆ ವಿನಂತಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್ ಮಟ್ಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೇಲ್ ವಕೀಲರುಗಳಾದ ವೀಣಾ ಗೌಡಪ್ಪನವರ್, ಶುಭಾಂಗಿನಿ ಪೂಜಾರ, ಹೊಸಮನಿ ಬಸವ್ವ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರಾಗೃಹದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಕಾರಾಗೃಹದ ಶಿಕ್ಷಕರಾದ ಕುರುಬೇಟ್ ಇವರು ಕಾರ್ಯಕ್ರಮವನ್ನು ನಿರೂಪಿಸಿ, ಸಭಿಕರನ್ನು ಸ್ವಾಗತಿಸಿ, ವಂದಿಸಿದರು.