ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಅರಿವು ಕಾರ್ಯಾಗಾರ

ಕೋಲಾರ,ಮಾ.೨೩: ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ಬಿಪಿಎಲ್ ಕಾರ್ಡ್ ದಾರರಿಗೆ ೧೩.೧೫ ಲಕ್ಷ ಕಾರ್ಡ್ ಮಾಡಿಸುವ ಗುರಿ ಹೊಂದಲಾಗಿದೆ. ಆದರೆ, ಕೇವಲ ಇದುವರೆಗೆ ೩.೨೫. ಲಕ್ಷ ಕಾರ್ಡ್ ಮಾಡಿಸಲಾಗಿದೆ. ಜನರು ಕಾರ್ಡ್ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾರಾಯಣಸ್ವಾಮಿ ತಿಳಿಸಿದರು.
ಜಿಲ್ಲಾ ಆರೋಗ್ಯ ಇಲಾಖೆಯಿಂದ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಹಾಗೂ ಆರೋಗ್ಯ ದಿನಾಚರಣೆ ಕುರಿತು ಮಾಧ್ಯಮದವರಿಗೆ ಸೋಮವಾರ ಆಯೋಜಿಸಿದ್ದ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಹಣ ಪಾವತಿಸುವಂತಿಲ್ಲ. ಬಿಪಿಎಲ್ ಕುಟುಂಬದ ಎಲ್ಲರಿಗೂ ೫ ಲಕ್ಷದ ವರೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತದೆ. ಎಪಿಎಲ್ ಕಾರ್ಡ್ ದಾರರಿಗೆ ಸ್ವಲ್ಪ ಹಣ ಪಾವತಿಸಬೇಕಾಗುತ್ತದೆ. ರೇಷನ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ. ೧ ಹಾಗೂ ೨ನೇ ಹಂತದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಮೂರನೇ ಹಂತದ ಸಮಸ್ಯೆಗೆ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ರೆಫರ್ ಮಾಡಲಾಗುತ್ತದೆ. ಆದರೆ, ಮೊದಲೇ ಖಾಸಗಿ ಆಸ್ಪತ್ರೆಗೆ ಸೇರಿ ರೆಫರಲ್ ಕೊಡಿ ಎಂದರೆ ಸಮಸ್ಯೆ ಆಗುತ್ತದೆ’ ಎಂದರು.
ಕೋಲಾರದಲ್ಲಿ ಸಂಭ್ರಮ್ ಆಸ್ಪತ್ರೆ, ನಾರಾಯಣ ಹೃದಯಾಲಯ, ಆರ್.ಎಲ್.ಜಾಲಪ್ಪ ಆಸ್ಪತ್ರೆ ಜೊತೆ ಆಯುಷ್ಮಾನ್ ಯೋಜನೆ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆ ಎಂದರೆ ಅನೈರ್ಮಲ್ಯ, ಭ್ರಷ್ಟಾಚಾರದ ಕಲ್ಪನೆ ಬರುತ್ತದೆ. ಆದರೆ, ಯೋಜನೆಗಳನ್ನು, ಸಾಧನೆಗಳನ್ನು ತಿಳಿಸಬೇಕು. ನಕಾರಾತ್ಮಕ ವಿಚಾರಗಳಿಂದ ಸಕಾರಾತ್ಮಕ ವಿಚಾರಗಳತ್ತ ಹೋಗಬೇಕು ಎಂದ ಅವರು, ಕೋಲಾರ ಆರೋಗ್ಯ ಇಲಾಖೆಗೆ ಕಾಯಕಲ್ಪ ವಿಚಾರದಲ್ಲಿ ೧೬ ಪ್ರಶಸ್ತಿಗಳು ಬಂದಿದೆ ಎಂದರು.
ಮಾನಸಿಕ ಆರೋಗ್ಯ ಮುಖ್ಯ. ಆದರೆ, ಆತಂಕದಿಂದ ಅವರು ಮುಂದೆ ಬಂದು ಚಿಕಿತ್ಸೆ ಪಡೆಯುವುದಿಲ್ಲ. ಅಂಜುತ್ತಾರೆ. ಯಾವುದೇ ಮುಜುಗರ ಇಲ್ಲದೆ ಚಿಕಿತ್ಸೆ ಪಡೆಯಬೇಕು. ಸಾಲಬಾಧೆ, ಪ್ರೀತಿ ವೈಫಲ್ಯ. ಅನುತ್ತೀರ್ಣ ದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣ ಬರುತ್ತವೆ. ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ, ಚಿಕಿತ್ಸೆ ನೀಡಿ ನಿಮ್ಹಾನ್ಸ್ ಗೆ ಹೋಗುವುದನ್ನು ತಪ್ಪಿಸಿದ್ದೇವೆ ಎಂದು ತಿಳಿಸಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪತ್ರಕರ್ತರ ಜವಾಬ್ದಾರಿ ಮಾಹಿತಿ, ಮಾರ್ಗದರ್ಶನ ನೀಡಬೇಕು. ಅದಕ್ಕೆ ನಮಗೆ ಮಾಹಿತಿ ಗೊತ್ತಿರಬೇಕು ಎಂದ ಅವರು, ಪ್ರತಿ ತಿಂಗಳು ತಜ್ಞ ವೈದ್ಯರ ಜೊತೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಂವಾದ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಜಿಲ್ಲಾ ಕ್ಷಯರೋಗ ನಿವಾರಣಾ ಅಧಿಕಾರಿ ಡಾ.ಜಿ.ಪ್ರಸನ್ನ ಕುಮಾರ್, ಯಾರಿಗಾದರೂ ಕ್ಷಯ ರೋಗ ಬರಬಹುದು. ಎರಡು ವಾರ ಕೆಮ್ಮು ಇದ್ದರೆ ಡಾಟ್ಸ್ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ತಪಾಸಣೆಗೆ ಉಚಿತ ಚಿಕಿತ್ಸೆ ಇದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ, ತಪಾಸಣೆ ಸೌಲಭ್ಯ ಇದೆ’ ಎಂದರು.