ರಾಷ್ಟ್ರಮಟ್ಟದ ಕ್ರೀಡಾಪಟು ಪವಿತ್ರಾಗೆ ಸೈಕಲ್ ನೀಡಿಕೆ

ರಾಷ್ಟ್ರೀಯ ಸೈಕ್ಲಿಂಗ್ ಕ್ರೀಡಾಪಟು ಯುವ ಪವಿತ್ರಾಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ವಿಧಾನಸೌಧದ ಮುಂದೆ ಸೈಕಲ್ ನೀಡಿ ಪ್ರೋತ್ಸಾಹಿಸಿದರು. ಸಚಿವರಾದ ನಾರಾಯಣಗೌಡ, ಸಿ.ಸಿ. ಪಾಟೀಲ್, ಸೋಮಶೇಖರ್ ಹಾಗೂ ಮತ್ತಿತರರು ಇದ್ದಾರೆ.

ಬೆಂಗಳೂರು,ಸೆ.೨೪- ರಾಷ್ಟ್ರಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಕುಮಾರಿ ಪವಿತ್ರಾ ಕುಟ್ಟಕೋಟಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸೈಕ್ಲಿಂಗ್ ಕ್ರೀಡೆಗೆ ಅಗತ್ಯವಿರುವ ಸೈಕಲ್‌ನ್ನು ವಿತರಿಸಿದರು.
ವಿಧಾನಸೌಧದ ಪಶ್ಚಿಮ ದ್ವಾರದ ಕೆಂಗಲ್ ಹನುಮಂತರಾಯ ಪ್ರತಿಮೆ ಮುಂಭಾಗ ನಡೆದ ಸರಳ ಸಮಾರಂಭದಲ್ಲಿ ಗದಗ ಜಿಲ್ಲೆಯ ರಾಷ್ಟ್ರಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಪವಿತ್ರಾ ಅವರಿಗೆ ಸೈಕಲ್ ನೀಡಿ ಪ್ರೋತ್ಸಾಹಿಸಲಾಯಿತು, ದಾನಿಗಳ ನೆರವಿನಿಂದ ಕ್ರೀಡಾಇಲಾಖೆ ೫ ಲಕ್ಷ ರೂ. ವೆಚ್ಚದ ಸೈಕಲ್‌ನ್ನು ಪವಿತ್ರಾ ಅವರಿಗೆ ನೀಡಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟಿವಿ ಸಂದರ್ಶನದಲ್ಲಿ ಭಾಗಿಯಾಗಿದ್ದಾಗ ಪವಿತ್ರಾ ಅವರು ಸೈಕಲ್ ಬೇಡಿಕೆಯನ್ನು ಇಟ್ಟಿದ್ದರು. ಇದನ್ನು ಕ್ರೀಡಾ ಇಲಾಖೆಯಿಂದ ಕೊಡಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದು, ಕ್ರೀಡಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಅವರು ದಾನಿಗಳ ನೆರವಿನಿಂದ ಸೈಕಲ್‌ನ್ನು ಕ್ರೀಡಾಪಟುಗೆ ಕೊಡಿಸಿದ್ದಾರೆ.
ಈಕಾರ್ಯಕ್ಕೆ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಪವಿತ್ರಾ ಅವರು ಮುಂದೆ ಪಟಿಯಾಲಾದಲ್ಲಿ ಏರ್ಪಡಿಸಿರುವ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲಲಿ ಎಂದು ಹಾರೈಸಿದರು.
ಬಿಜಾಪುರದಲ್ಲಿ ಸದ್ಯದಲ್ಲೆ ಅಂತಾರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಟ್ರ್ಯಾಕ್ ಕಾರ್ಯಾರಂಭವಾಗಲಿದೆ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಹೇಳಿದರು.
ಸೈಕಲ್‌ನ್ನು ಕೆನಡಾದಿಂದ ತರಿಸಲಾಗಿದೆ. ಎಂಬೇಸಿ, ಬ್ಲಾಸಂ ಆಸ್ಪತ್ರೆ ಹಾಗೂ ಮಧೂಸೂದನ್ ಎಂಬುವರು ಸಿಎಸ್‌ಆರ್ ನಿಧಿಯಿಂದ ಈ ಹಣ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಚಿವರಾದ ನಾರಾಯಣಗೌಡ, ಎಸ್.ಟಿ ಸೋಮಶೇಖರ್, ವಿ ಸೋಮಣ್ಣ, ಸಿಸಿ ಪಾಟೀಲ್, ಬಿ. ಶ್ರೀರಾಮುಲು ಬಿಡಿಎ ಅಧ್ಯಕ್ಷ ಎಸ್‌ಆರ್ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.