ರಾಷ್ಟ್ರಪತಿ ಪ್ರಮಾಣವಚನ ಸಮಾರಂಭ: ಶಿಷ್ಠಾಚಾರ ಉಲ್ಲಂಘನೆ; ಸಭಾಪತಿಗೆ ಪತ್ರ

ನವದೆಹಲಿ, ಜು.25- ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೂಕ್ತ ಆಸನ ವ್ಯವಸ್ಥೆ ಮಾಡದೆ ಶಿಷ್ಠಚಾರ ಉಲ್ಲಂಘನೆ ಮಾಡಲಾಗಿದೆ ಎಂದು ವಿರೋಧ ಪಕ್ಷಗಳ ಎಲ್ಲಾ ರಾಜ್ಯಸಭಾ ಸದಸ್ಯರು, ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ದೂರು ಸಲ್ಲಿಸಿವೆ.

ಮಲ್ಲಿಕಾರ್ಜುನ ಖರ್ಗೆ “ಅವರು ಹೊಂದಿರುವ ಸ್ಥಾನಕ್ಕೆ ಅನುಗುಣವಾಗಿ ಶಿಷ್ಠಾಚಾರ ಪಾಲನೆ ಮಾಡಲಾಗಿಲ್ಲ. ಇದು ಆಘಾತಕಾರಿ ಬೆಳವಣಿಗೆ ಎಂದು ಉಪ ರಾಷ್ಟ್ರಪತಿಯೂ ಆಗಿರುವ ರಾಜ್ಯಸಭೆಯ ಸಭಾಪತಿಗಳೀಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಖರ್ಗೆ ಅವರಿಗೆ ಮೂಲೆಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿದೆ ಇದು ಸರಿಯಲ್ಲ. ಈ ರೀತಿಯ ಶಿಷ್ಠಾಚಾರ ಉಲ್ಲಂಘನೆ ಸರಿಯಲ್ಲಿ ಎಂದು ಹಲವು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿಷ್ಠಾಚಾರ ಉಲ್ಲಂಘನೆ ದೊಡ್ಡ ಅಪರಾಧ. ಈ ರೀತಿಯ ಬೆಳವಣಿಗೆ ನೋವು ತಂದಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಖರ್ಗೆ ಅವರೇ ಬರಲಿಲ್ಲ:

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಷ್ಟ್ರಪತಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಶಿಷ್ಠಾಚಾರ ಉಲ್ಲಂಘನೆ ಮಾಡಲಾಗಿದೆ ಎನ್ನುವ ದೂರು ಬಂದಿದೆ. ಮೊದಲ ಸಾಲಿನಲ್ಲಿ ಆಸನ ನಿಗಧಿ ಮಾಡಿದ್ದೇವೆ ಬನ್ನಿ ಕುಳಿತುಕೊಳ್ಳಿ ಎಂದರೆ ಮಲ್ಲಿ ಕಾರ್ಜುನ ಖರ್ಗೆ ಅವರೇ ಬರಲಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಹೇಳಿದ್ದಾರೆ.

ಕರೆಯುವುದು ನಮ್ಮ ಕೆಲಸ ನಾವು ಅದನ್ನು ಮಾಡಿದ್ದೇವೆ. ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ನಿರಾಕರಿಸಿ ಮೂಲೆಯಲ್ಲಿ ಕುಳಿತುಕೊಂಡರು. ಈಗ ಶಿಷ್ಠಾಚಾರ ಉಲ್ಲಂಘನೆಯಾಗಿದೆ ಎಂದು ಬೊಬ್ಬೆ ಹೊಡೆದರೆ ಹೇಗೆ ಎಂದು ಪ್ರತಿಪಕ್ಷಗಳ ರಾಜ್ಯಸಭಾ ಸದಸ್ಯರಿಗೆ ತಿರುಗೇಟು ನೀಡಿದ್ದಾರೆ.