ರಾಷ್ಟ್ರಪತಿ ಪದಕ ಗೌರವಕ್ಕೆ ಪಾತ್ರರಾದ ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಜ. 27;: ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಅನಿಲ್ ಕುಮಾರ್ ಭೂಮರೆಡ್ಡಿ ಅವರು ಗಣರಾಜ್ಯೋತ್ಸವ – 2024 ರ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.1994 ರಲ್ಲಿ ಅನಿಲ್ ಕುಮಾರ್ ಭೂಮರೆಡ್ಡಿ ಅವರು ಪೊಲೀಸ್ ಉಪ ನಿರೀಕ್ಷಕರಾಗಿ (ಪಿಎಸ್ಐ) ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ನಂತರ ಪೊಲೀಸ್ ಇಲಾಖೆಯಲ್ಲಿ ನಿರೀಕ್ಷಕರಾಗಿ (ಪಿಐ), ಪೊಲೀಸ್ ಉಪಾಧೀಕ್ಷಕರಾಗಿ (ಡಿವೈಎಸ್ಪಿ), ಹೆಚ್ಚುವರಿ ಅಧೀಕ್ಷಕರಾಗಿ (ಎಎಸ್ಪಿ) ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ.ಸದ್ಯ ಅವರು ಶಿವಮೊಗ್ಗ ಜಿಲ್ಲಾ ಎಎಸ್ಪಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲ ಸಲ್ಲಿಸಿರುವ ಪ್ರಶಂಸನೀಯ ಸೇವೆಗಾಗಿ 2024 ನೇ ಸಾಲಿನ ಗಣರಾಜ್ಯೋತ್ಸವ ನಿಮಿತ್ತ ನೀಡಲಾಗುವ ರಾಷ್ಟ್ರಪತಿಗಳ ಪೊಲೀಸ್ ಶ್ಲಾಘನೀಯ ಸೇವಾ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.ಅನಿಲ್ ಕುಮಾರ್ ಭೂಮರೆಡ್ಡಿ ಅವರಿಗೆ ಜಿಲ್ಲಾ ಪೊಲೀಸ್ ಇಲಾಖೆವತಿಯಿಂದ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ ಜ. 26 ರಂದು ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನಿಸಿ ಅಭಿನಂದಿಸಿದ್ದಾರೆ.