ರಾಷ್ಟ್ರಪತಿ ಚುನಾವಣೆ ಸ್ಟ್ರಾಂಗ್ ರೂಂ ನಲ್ಲಿ ಮತ ಪೆಟ್ಟಿಗೆ

ನವದೆಹಲಿ,ಜು.೧೯- ರಾಷ್ಟ್ರಪತಿ ಚುನಾವಣೆ ಮತದಾನ ನಿನ್ನೆ ಮುಕ್ತಾಯಗೊಂಡ ಬೆನ್ನಲ್ಲೆ ಜುಲೈ ೨೧ ರಂದು ನಡೆಯುವ ಮತ ಎಣಿಕೆ ಪ್ರಕ್ರಿಯೆಗೆ ಸಿದ್ಧತೆಗಳು ಆರಂಭವಾಗಿವೆ. ಎಲ್ಲ ರಾಜ್ಯಗಳಲ್ಲಿ ಮತದಾನಕ್ಕಾಗಿ ಸ್ಥಾಪಿಸಲಾಗಿದ್ದ ಮತಗಟ್ಟೆಗಳಿಂದ ಬ್ಯಾಲೆಟ್ ಬಾಕ್ಸ್‌ಗಳು ವಿಶೇಷ ವಿಮಾನದಲ್ಲಿ ದೆಹಲಿಗೆ ಬಂದಿವೆ. ದೆಹಲಿಯ ಸಂಸತ್ ಭವನದ ಮತಗಟ್ಟೆಯ ಬ್ಯಾಲೆಟ್ ಬಾಕ್ಸ್ ಸೇರಿದಂತೆ ಎಲ್ಲ ಬ್ಯಾಲೆಟ್ ಬಾಕ್ಸ್‌ಗಳನ್ನು ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿಡಲಾಗಿದೆ.
ವಿಶೇಷವೆಂದರೆ ವಿಮಾನದಲ್ಲಿ ಬ್ಯಾಲೆಟ್ ಬಾಕ್ಸ್‌ಗಳಿಗೆ ಪ್ರತ್ಯೇಕ ಸೀಟು ಕಾಯ್ದಿರಿಸಿ ಅವುಗಳನ್ನು ಬಿಗಿಭದ್ರತೆಯಲ್ಲಿ ದೆಹಲಿಗೆ ತರಲಾಗಿದೆ. ಮತ ಪೆಟ್ಟಿಗೆ ಜತೆಗೆ ಒಬ್ಬ ಅಧಿಕಾರಿಯು ವಿಮಾನದಲ್ಲಿ ಪ್ರಯಾಣಿಸಿ ಮತಪೆಟ್ಟಿಗೆ ಸುರಕ್ಷತೆಯನ್ನು ನೋಡಿಕೊಂಡಿದ್ದಾರೆ.
ಕೇಂದ್ರ ಚುನಾವಣಾ ಆಯೋಗ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮತ ಪೆಟ್ಟಿಗೆಗಳನ್ನು ತೆಗೆದುಕೊಂಡು ಬರಲು ವಿಮಾನದಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಿತ್ತು.
ಈ ಹಿಂದೆ ಮತ ಪೆಟ್ಟಿಗೆಗಳನ್ನು ಚುನಾವಣಾಧಿಕಾರಿಗಳು ಇದನ್ನು ಹ್ಯಾಂಡ್‌ಬ್ಯಾಗ್‌ನಂತೆ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಪಾಠವಿತ್ತು. ಆದರೆ, ಈ ಬಾರಿ ಚುನಾವಣಾ ಆಯೋಗ ಮತ ಪೆಟ್ಟಿಗೆ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು, ವಿಮಾನದಲ್ಲಿ ತರಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಜು. ೨೧ ರಂದು ಮತ ಎಣಿಕೆ ನಡೆಯಲಿದ್ದು, ರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷಗಳಿಂದ ಸ್ಪರ್ಧಿಸಿದ್ದ ಮಾಜಿ ಕೇಂದ್ರ ಸಚಿವ ಯಶ್ವಂತಸಿನ್ಹಾ ಅವರ ಭವಿಷ್ಯ ನಿರ್ಧಾರವಾಗಲಿದೆ.