ರಾಷ್ಟ್ರಪತಿ ಚುನಾವಣೆ: ಬಸ್‌ನಲ್ಲಿ ಬಂದು ಬಿಜೆಪಿ ಶಾಸಕರ ಮತದಾನ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪರವರೊಂದಿಗೆ ಸಚಿವರು ಮತ್ತು ಬಿಜೆಪಿ ಶಾಸಕರು ಒಟ್ಟಾಗಿ ಆಗಮಿಸಿ ಮತ ಚಲಾಯಿಸಿದರು.

ಬೆಂಗಳೂರು, ಜು. ೧೮- ರಾಷ್ಟ್ರಪತಿ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡರು, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಬಿಜೆಪಿ-ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರುಗಳು ಮತ ಚಲಾಯಿಸಿದರು.
ರಾಷ್ಟ್ರಪತಿ ಚುನಾವಣೆಗೆ ವಿಧಾನಸೌಧದ ಕೊಠಡಿ ಸಂಖ್ಯೆ ೧೦೬ ರಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಬೆಳಗ್ಗೆ ೧೦ ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನೇತೃತ್ವದಲ್ಲಿ ಬಿಜೆಪಿ ಶಾಸಕರ ಒಂದು ಗುಂಪು ವಿಧಾನಸೌಧಕ್ಕೆ ಆಗಮಿಸಿ ಮತ ಚಲಾಯಿಸಿದರು.
ನಂತರ ಮುಖ್ಯಮಂತ್ರಿ ಬಸವರಾಜಬೊಮ್ಮೊಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಹಲವು ಬಿಜೆಪಿ ಶಾಸಕರುಗಳು ಒಟ್ಟಾಗಿ ಬಂದು ಮತ ಚಲಾಯಿಸಿದರು.
ಬಸ್‌ನಲ್ಲಿ ಬಂದ ಬಿಜೆಪಿ ಶಾಸಕರು
ಮತದಾನಕ್ಕೂ ಮೊದಲು ಬಿಜೆಪಿ ಶಾಸಕರುಗಳೆಲ್ಲರೂ ಬಿಎಂಟಿಸಿ ಬಸ್ಸನಲ್ಲೆ ತಾವು ವಾಸ್ತವ್ಯ ಹೂಡಿದ್ದ ಶಾಘ್ರೀಲ ಹೋಟೆಲ್‌ನಿಂದ ವಿಧಾನಸೌಧಕ್ಕೆ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು
ಮುಖ್ಯಮಂತ್ರಿ ಬಸರಾಜಬೊಮ್ಮಾಯಿ ಹಾಗೂ ಮಾಜಿ ಮುಖ್ಮಯಂತ್ರಿ ಯಡಿಯೂರಪ್ಪ ಸಹ ಶಾಸಕರ ಜತೆ ಬಸ್‌ನಲ್ಲೆ ವಿಧಾನಸೌಧಕ್ಕೆ ಆಗಮಿಸಿ ಮತ ಹಾಕಿದರು.
ಇಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಬಿಜೆಪಿ ಶಾಸಕರು ವಾಸ್ತವ್ಯ ಹೂಡಿದ್ದ ಹೋಟೆಲ್‌ಗೆ ಆಗಮಿಸಿದ್ದರು. ಬೊಮ್ಮಾಯಿ ಅವರಿಗಿಂತ ಮೊದಲೆ ಯಡಿಯೂರಪ್ಪ ಸಹ ಹೋಟೆಲ್‌ಗೆ ಬಂದು ಶಾಸಕರ ಜತೆ ಸೇರಿಕೊಂಡಿದ್ದರು. ಇದಾದ ನಂತರ ಮೂರು ಬಸ್‌ಗಳಲ್ಲಿ ಬಿಜೆಪಿ ಶಾಸಕರುಗಳು ವಿಧಾನಸೌಧಕ್ಕೆ ಹೊರಟರು. ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹ ಶಾಸಕರ ಜತೆ ಬಸ್ ಏರಿದ್ದು, ಇವರಿಬ್ಬರೂ ಒಂದೇ ಸೀಟ್‌ನಲ್ಲಿ ಅಕ್ಕಪಕ್ಕ ಆಸೀನರಾಗಿದ್ದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ನೇತೃತ್ವದಲ್ಲಿ ಬಿಜೆಪಿ ಶಾಸಕರು ವಿಧಾನಸೌಧಕ್ಕೆ ಆಗಮಿಸಿ ರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಿದರು.

ಬಸ್‌ನಲ್ಲಿ ಕುಳಿತು ವಿಧಾನಸೌಧಕ್ಕೆ ತೆರಳುವ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇಬ್ಬರೂ ಛಾಯಾಗ್ರಾಹಕರಿಗೆ ವಿಜಯದ ಸಂಕೇತ ತೋರಿಸಿದ್ದು ಗಮನ ಸೆಳೆಯಿತು.
ವಿಧಾನಸೌಧಕ್ಕೆ ತೆರಳುವ ಮುನ್ನ ಬಿಜೆಪಿ ಶಾಸಕರಿಗೆ ಮತ್ತೊಮ್ಮೆ ಯಾವ ರೀತಿ ಮತ ಹಾಕಬೇಕು ಎಂಬ ಬಗ್ಗೆ ಮೌಖಿಕವಾಗಿ ಸೂಚನೆ ನೀಡಲಾಯಿತು.
ಕಳೆದ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯ ೧೭ ಮತಗಳು ಅಸಿಂಧುಗೊಂಡಿದ್ದವು. ಹೀಗಾಗಿ ಈ ಬಾರಿ ಒಂದೂ ಮತವೂ ಅಸಿಂಧುವಾಗದಂತೆ ಬಿಜೆಪಿಯ ಎಲ್ಲ ಶಾಸಕರಿಗೂ ಮತದಾನ ಕುರಿತು ತಾಲೀಮು ನೀಡಲಾಗಿತ್ತು.
ಬಿಜೆಪಿ ಶಾಸಕರೆಲ್ಲರೂ ಬಿಎಂಟಿಸಿ ಬಸ್‌ನಲ್ಲಿ ಶಾಂಘ್ರಿಲಾ ಹೋಟೆಲ್‌ನಿಂದ ವಿಧಾನಸೌಧಕ್ಕೆ ಬಂದರೆ, ಶಾಸಕರಾದ ಸುರೇಶ್‌ಕುಮಾರ್ ಮತ್ತು ಕುಮಾರ್ ಬಂಗಾರಪ್ಪ ಬಸ್‌ನಲ್ಲಿ ಬಾರದೆ ನಡೆದುಕೊಂಡೆ ವಿಧಾನಸೌಧಕ್ಕೆ ಬಂದು ಮತ ಹಾಕಿದರು.
ಮತದಾನಕ್ಕೆ ತೆರಳುವ ಮುನ್ನ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಸೇರಿದಂತೆ ಬಿಜೆಪಿಯ ಬಹುತೇಕ ಶಾಸಕರು ಕೇಸರಿ ಶಾಲು ಹಾಕಿಕೊಂಡಿದ್ದು, ವಿಶೇಷವಾಗಿತ್ತು.
ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಎಲ್ಲ ಶಾಸಕರಿಗೂ ಕಳೆದ ಶನಿವಾರದಿಂದಲೇ ಶಾಘ್ರಿಲಾ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ, ಅಲ್ಲಿ ಯಾವ ರೀತಿ ಮತ ಹಾಕಬೇಕು ಎಂಬ ಬಗ್ಗೆ ತರಬೇತಿ ನೀಡಲಾಗಿತ್ತು.
ದೇವೇಗೌಡರ ಮತದಾನ
ರಾಷ್ಟ್ರಪತಿ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯರಾದ ದೇವೇಗೌಡರು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯ ವಿ. ಶ್ರೀನಿವಾಸಪ್ರಸಾದ್ ದೆಹಲಿಯ ಸಂಸತ್ ಭವನದ ಬದಲು ರಾಜ್ಯದ ಮತಗಟ್ಟೆಯಲ್ಲೇ ಮತ ಚಲಾಯಿಸಲು ಅನುಮತಿ ಪಡೆದಿದ್ದು, ಅದರಂತೆ ದೇವೇಗೌಡರು ಹಾಗೂ ಶ್ರೀನಿವಾಸಪ್ರಸಾದ್ ವಿಧಾನಸೌಧದ ಮತಗಟ್ಟೆಯಲ್ಲೇ ಮತ ಹಾಕಿದರು
ಜೆಡಿಎಸ್ ಶಾಸಕರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಒಬ್ಬೊಬ್ಬರಾಗೇ ಬಂದು ಮತ ಚಲಾಯಿಸಿದರು
ಕಾಂಗ್ರೆಸ್ ಶಾಸಕರ ಮತದಾನ
ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರು ಮತದಾನ ಮಾಡುವ ಮುನ್ನ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಕೊಠಡಿಯಲ್ಲಿ ಸೇರಿದ್ದು ಶಾಸಕರಿಗೆ ಯಾವ ರೀತಿ ಮತದಾನ ಮಾಡಬೇಕು ಎಂಬುದನ್ನು ಸಿದ್ಧರಾಮಯ್ಯ ವಿವರಿಸಿದರು.
ಮತಗಟ್ಟೆಯಲ್ಲಿ ನೀಡುವ ಪೆನ್ನನ್ನೇ ಬಳಸಿ ಮತ ಹಾಕಿ ಯಶವಂತಸಿನ್ಹ ನಮ್ಮ ಅಭ್ಯರ್ಥಿ ಅವರಿಗೆ ಮತಹಾಕಬೇಕು ಎಂದು ಸಿದ್ಧರಾಮಯ್ಯ ಕಾಂಗ್ರೆಸ್ ನಎಲ್ಲ ಶಾಸಕರಿಗೂ ಸೂಚನೆ ನೀಡಿದ್ದರು.
ನಂತರ ಕಾಂಗ್ರೆಸ್ ಶಾಸಕರ ಜತೆ ಬಂದು ಸಿದ್ಧರಾಮಯ್ಯ, ಡಾ. ಜಿ. ಪರಮೇಶ್ವರ್ ಇವರೆಲ್ಲಾ ಮತ ಹಾಕಿದರು.
ರಾಷ್ಟ್ರಪತಿ ಚುನಾವಣೆಗೆ ಪ್ರತಿಯೊಬ್ಬ ಶಾಸಕರು ಮತ ಹಾಕಬೇಕು ಎಂಬ ಸೂಚನೆ ನೀಡಲಾಗಿದ್ದು, ಯಾವುದೇ ಶಾಸಕರು ಮತದಾನದಿಂದ ದೂರ ಉಳಿಯಂದತೆ ಶಾಸಕಾಂಗ ಪಕ್ಷದ ಕಾರ್ಯದರ್ಶಿ ತುಕಾರಾಂ ಎಲ್ಲ ಶಾಸಕರಿಗೂ ಸೂಚನೆ ನೀಡಿದ್ದರು.
ಸಂಜೆ ೫ ಗಂಟೆವರೆಗೂ ಮತದಾನಕ್ಕೆ ಅವಕಾಶವಿದೆ.