ರಾಷ್ಟ್ರಪತಿ ಚುನಾವಣೆ ನಾಳೆ ದ್ರೌಪದಿ ನಾಮಪತ್ರ

ನವದೆಹಲಿ,ಜೂ.೨೩- ದೇಶದ ಅತ್ಯುನ್ನತ ಸಂವಿಧಾನಿಕ ಸ್ಥಾನ ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಮಿತ್ರ ಪಕ್ಷಗಳ ಅಭ್ಯರ್ಥಿಯಾಗಿರುವ ಜಾರ್ಜಾಂಡ್ ಮಾಜಿ ರಾಜ್ಯಪಾಲರಾದ ದ್ರೌಪದಿ ಮುರ್ಮು ನಾಳೆ ನಾಮ ಪತ್ರ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎನ್ ಡಿ ಎ ಮಿತ್ರ ಪಕ್ಷದ ಪ್ರಮುಖ ನಾಯಕರು ಭಾಗಿಯಾಗುವ ಸಾಧ್ಯತೆ ಇದೆ.
ಒಡಿಶಾದ ಭುವನೇಶ್ವರದ ಎಂಸಿಎಲ್ ಅತಿಥಿ ಗೃಹದಿಂದ ಇಂದು ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆಯಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರೊಂದಿಗೆ ಆಗಮಿಸಿ ಅಲ್ಲಿಂದ ದೆಹಲಿ ತಲುಪಿದರು.
ನಂಬಲಸಾಧ್ಯ:
ತಾಯಿ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ನಂಬಲಸಾಧ್ಯ ಎಂದು ದ್ರೌಪದಿ ಮುರ್ಮು ಅವರ ಪುತ್ರಿ ಇತಿಶ್ರೀ ಮುರ್ಮು ಹೇಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ರಾಷ್ಟ್ರಪತಿ ಅಭ್ಯರ್ಥಿಯಾಗುವುದನ್ನು ನಾವು ಊಹಿಸಿರಲಿಲ್ಲ. ನಂಬಲೂ ಆಗುತ್ತಿಲ್ಲ. ನಾವು ವಾಸ್ತವಕ್ಕೆ ಬರುತ್ತಿದ್ದೇವೆ. ನಿಜಕ್ಕೂ ಅಚ್ಚರಿ ವಿಷಯ ಎಂದಿದ್ದಾರೆ.