ರಾಷ್ಟ್ರಪತಿ ಆಡಳಿತ ಜಾರಿಗೆ ಮನವಿ

ಧಾರವಾಡ, ಮೇ 5: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ನಂತರ ನಡೆದ ಹಿಂಸಾಚಾರವನ್ನು ಖಂಡಿಸಿ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರಿಂದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಮೇ 2ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದಿದ್ದು, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‍ನ ಕೆಲವರಿಂದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಕಗ್ಗೊಲೆಯಾಗಿದೆ. ಮಹಿಳಾ ಕಾರ್ಯಕರ್ತರ ಮೇಲೆ ಬಲಾತ್ಕಾರಗೈದು ಅವರ ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿ ಹೀನ ಪ್ರವೃತ್ತಿಯಲ್ಲಿ ತೊಡಗಿದ್ದು ಅವರ ಅಟ್ಟಹಾಸದಿಂದ ಇಡೀ ಪಶ್ಚಿಮ ಬಂಗಾಳ ಇಂದು ಕಾಣದ ಗಲಭೆ ದೊಂಬಿ ಕಾಣುತ್ತಿದೆ ಎಂದು ಕಾರ್ಯಕರ್ತರು ದೂರಿದರು.

ಬಿಜೆಪಿ ಧಾರವಾಡ ನಗರ 71 ಹಾಗು ಹುಬ್ಬಳ್ಳಿ ಧಾರವಾಡ ಪಶ್ಚಿಮ 74 ಕ್ಷೇತ್ರದ ಪ್ರಮುಖ ಪದಾಧಿಕಾರಿಗಳ ನೇತೃತ್ವದಲ್ಲಿ ಮೌನ ಪ್ರತಿಭಟನೆ ಮಾಡಿ ಕೂಡಲೆ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯರಾದ ಈರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ, ಸುನೀಲ ಮೋರೆ, ಬಸವರಾಜ ಗರಗ, ಮೋಹನ ರಾಮದುರ್ಗ, ಶ್ರೀನಿವಾಸ ಕೋಟ್ಯಾನ ಮತ್ತಿತರರು ಉಪಸ್ಥಿತರಿದ್ದರು.