ರಾಷ್ಟ್ರಪತಿಯಾಗಿ ದ್ರೌಪದಿ ಆಯ್ಕೆ ಸುಗಮ

ನವದೆಹಲಿ, ಜು. ೧೮- ದೇಶದ ಮೊದಲ ಪ್ರಜೆ ೧೫ನೇ ರಾಷ್ಟ್ರಪತಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದ್ದು, ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಎಲ್ಲ ಪ್ರತಿಪಕ್ಷಗಳ ಬೆಂಬಲದಿಂದ ಸ್ಪರ್ಧಿಸಿರುವ ಯಶವಂತ್‌ಸಿನ್ಹಾ ಇವರಿಬ್ಬರಲ್ಲಿ ಯಾರಿಗೆ ರಾಷ್ಟ್ರಪತಿ ಪಟ್ಟ ಒಲಿಯಲಿದೆ ಎಂಬುದು ಜು. ೨೧ ರಂದು ಬಹಿರಂಗವಾಗಲಿದೆ.
ದೇಶದ ಬಹುತೇಕ ರಾಜ್ಯಗಳಲ್ಲಿ ಎನ್‌ಡಿಎ ಅಧಿಕಾರದಲ್ಲಿದ್ದು ಹಾಗೂ ಹಲವು ಪ್ರಾದೇಶಿಕ ಪಕ್ಷಗಳು ಬುಡಕಟ್ಟು ಸಮುದಾಯದ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಕಣಕ್ಕಿಳಿಸಿದೆ. ಬುಡಕಟ್ಟು ಸಮುದಾಯಕ್ಕೆ ಸೇರಿದೆ ಎಂಬ ಕಾರಣಕ್ಕಾಗಿ ದ್ರೌಪದಿ ಅವರಿಗೆ ಪ್ರಾದೇಶಿಕ ಪಕ್ಷಗಳು ಬೆಂಬಲ ಸೂಚಿಸಿದೆ.
ಒಂದು ಕಾಲದಲ್ಲಿ ಬಿಜೆಪಿಯಲ್ಲೇ ಇದ್ದು ಕೇಂದ್ರ ಸಚಿವರಾಗಿ ಅಧಿಕಾರ ಅನುಭವಿಸಿ ನಾಯಕತ್ವದ ವಿರುದ್ಧ ಸಿಡಿದ್ದೆದ್ದು ಬಿಜೆಪಿ ತೊರೆದಿರುವ ಯಶವಂತ್ ಸಿನ್ಹಾ ಅವರನ್ನು ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಎನ್‌ಡಿಎ ಅಭ್ಯರ್ಥಿ ದ್ರೌಪದಿ ಅವರಿಗೆ ೪೪ ಪಕ್ಷಗಳ ಬೆಂಬಲ ವ್ಯಕ್ತಪಡಿಸಿದರೆ, ಯಶವಂತ್ ಸಿನ್ಹಾ ಅವರಿಗೆ ೩೪ ಪಕ್ಷಗಳು ಬೆಂಬಲ ಸೂಚಿಸಿವೆ. ಈ ಅಂಕಿಅಂಶಗಳನ್ನು ಗಮನಿಸಿದರೆ ದ್ರೌಪದಿ ಮುರ್ಮು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ೧೦,೮೬,೪೩೧ ಲಕ್ಷ ಮತಗಳಿದ್ದು ಈ ಪೈಕಿ ಅರ್ಧಕ್ಕಿಂತ ಹೆಚ್ಚು ಮತ ಪಡೆದವರು ರಾಷ್ಟ್ರಪತಿಯಾಗಿ ಆಯ್ಕೆಯಾಗುತ್ತಾರೆ.
ನೂತನ ರಾಷ್ಟ್ರಪತಿ ಆಯ್ಕೆ ಇಂದು ಮತದಾನ ಪ್ರಗತಿಯಲ್ಲಿದೆ. ಒಟ್ಟು ೪,೮೦೦ ಜನಪ್ರತಿನಿಧಿಗಳು ೧೫ನೇ ರಾಷ್ಟ್ರಪತಿ ಆಯ್ಕೆಗಾಗಿ ಮತಚಲಾಯಿಸಿದ್ದಾರೆ. ಎನ್‌ಡಿಎ ಅಭ್ಯರ್ಥಿ ಬಳಿ ಈಗಾಗಲೇ ೬.೬೭ ಲಕ್ಷ ಮತಗಳಿವೆ. ಹೀಗಾಗಿ ದ್ರೌಪದಿ ಅವರು ಮೂರನೇ ಎರಡರಷ್ಟು ಮತಗಳೊಂದಿಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಅತ್ಯುನ್ನತ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ರಾಜಧಾನಿ ದೆಹಲಿಯ ಸಂಸತ್ ಭವನ ಹಾಗೂ ರಾಜ್ಯಗಳ ವಿಧಾನಸಭೆಯಲ್ಲಿ ಇಂದು ಬೆಳಿಗ್ಗೆ ೧೦ ಗಂಟೆ ಸಂಜೆ ೫ ಗಂಟೆವರೆಗೆ ಮತದಾನ ನಡೆಯಿತು. ಜುಲೈ ೨೧ ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಜುಲೈ ೨೫ ರಂದು ನೂತನ ರಾಷ್ಟ್ರಪತಿಯ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಂಸತ್ ಭವನಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ನಂತರ ಕೇಂದ್ರ ಸಚಿವರಾದ ಅಮಿತ್ ಶಾ, ಎಸ್. ಜೈಶಂಕರ್, ಸರಬಾನಂದ ಸೋನಾವಾಲ್, ಹರ್ದಿಪ್ ಸಿಂಗ್ ಪುರಿ, ಅರ್ಜುನ್ ಮುಂಡಾ ಸೇರಿದಂತೆ ಸಂಪುಟ ಸಹೋದ್ಯೋಗಿಗಳು ಮತದಾನ ಮಾಡಿದರು.
ಕಾಂಗ್ರೆಸ್ ಅಧ್ಯಕ್ಷ ಸೋನಿಯಾಗಾಂಧಿ, ರಾಹುಲ್ ಗಾಂಧಿ ರಾಜಸಭೆಯಲ್ಲಿನ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಮುಖಂಡರು ಮತ ಚಲಾಯಿಸಿದರು. ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಗಾಲಿ ಕುರ್ಚಿಯಲ್ಲಿ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು.
ರಾಜ್ಯದ ಸಂಸತ್ ಸದಸ್ಯರು, ರಾಜಸಭಾ ಸದಸ್ಯರು, ಸೇರಿದಂತೆ ಒಟ್ಟು ೭೭೬ ಸಂಸದರು ಹಾಗೂ ೪,೦೩೩ ಶಾಸಕರು ಇಂದು ತಮ್ಮ ಹಕ್ಕನ್ನು ಚಲಾಯಿಸಿದರು. ಮತಗಳ ಒಟ್ಟು ಮೌಲ್ಯ ೧೦,೮೬,೪೩೧ ಆಗಿದ್ದು ಇದರಲ್ಲಿ ಶಾಸಕರ ಮತಗಳು ೫,೪೩,೨೩೧ ಮತ್ತು ಸಂಸದರ ಮತಗಳು ೫,೪೩,೨೦೦ ಆಗಿದೆ.
ಸಂಸತ್ತಿನ ಚುನಾಯಿತ ಸದಸ್ಯರು ಕೇಂದ್ರಾಡಳಿತ ಪ್ರದೇಶಗಳು ಎಲ್ಲಾ ರಾಜ್ಯಗಳ ವಿಧಾನಸಭಾ ಸದಸ್ಯರು ರಾಷ್ಟ್ರಪತಿ ಆಯ್ಕೆಗೆ ಮತ ಚಲಾಯಿಸುತ್ತಿದ್ದಾರೆ. ನಾಮನಿರ್ದೇಶಿತ ಸಂಸದರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಮತ ಚಲಾಯಿಸುವಂತಿಲ್ಲ.
ಈ ಮಧ್ಯೆ ಮತದಾನ ಮಾಡಿದ ನಂತರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸುದ್ದಿಗಾರರೊಂದಿಗೆ ಮಾತನಾಡಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ದಾಖಲೆಯ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಮಾತನಾಡಿ ಪ್ರಜಾಪ್ರಭುತ್ವ ಉಳಿವಿಗಾಗಿ ತಮ್ಮ ಮತ ನೀಡುವಂತೆ ಮನವಿ ಮಾಡಿದರು. ಪ್ರಜಾತಂತ್ರದ ಉಳಿಸುವ ದೃಷ್ಟಿಯಿಂದ ರಾಷ್ಟ್ರಪತಿ ಚುನಾವಣೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಕಾರಣಕ್ಕಾಗಿ ತಾವು ಇಡೀ ದೇಶ ಸುತ್ತಿ ಈ ಸಂದೇಶ ನೀಡಲು ಯತ್ನಿಸಿದ್ದೇನೆ ಎಂದು ಮನವಿ ಮಾಡಿದರು.

ಮತಮೌಲ್ಯ ಲೆಕ್ಕಚಾರ
ರಾಷ್ಟ್ರಪತಿ ಚುನಾವಣಾ ಪ್ರಕ್ರಿಯೆ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗಿಂತ ಭಿನ್ನವಾಗಿರುತ್ತದೆ. ಒಬ್ಬ ಜನಪ್ರತಿನಿಧಿ ಚಲಾಯಿಸುವ ಮತವನ್ನು ಒಂದು ಮತ ಎಂದು ಪರಿಗಣಿಸುವುದಿಲ್ಲ. ಬದಲಾಗಿ ಆಯಾ ರಾಜ್ಯಗಳ ಜನಸಂಖ್ಯೆಯ ಆಧಾರದ ಮೇಲೆ ಅಲ್ಲಿನ ಶಾಸಕನ ಮತಮೌಲ್ಯ ನಿರ್ಧಾರವಾಗಲಿದೆ.
ರಾಜ್ಯ ವಿಧಾನಸಭೆಯ ಒಬ್ಬ ಸದಸ್ಯ ಚಲಾಯಿಸುವ ಮತ ೧೩೧ ಮತಮೌಲ್ಯ ಹೊಂದಿರುತ್ತವೆ. ರಾಜ್ಯದ ಅತಿದೊಡ್ಡ ವಿಧಾನಸಭೆಯಾಗಿರುವ ಉತ್ತರ ಪ್ರದೇಶದ ಪ್ರತಿಯೊಬ್ಬ ಶಾಸಕದ ಮತಮೌಲ್ಯ ೨೦೮ ಆಗಿರುತ್ತದೆ. ಕರ್ನಾಟಕದ ವಿಧಾನಸಭೆಯ ಒಬ್ಬ ಸದಸ್ಯ ಮತಮೌಲ್ಯ ೧೩೧ ಆಗಿರುತ್ತದೆ. ದೇಶದ ಚಿಕ್ಕ ರಾಜ್ಯವಾಗಿರುವ ಸಿಕ್ಕಂನ ಪ್ರತಿ ಶಾಸಕನ ಮತಮೌಲ್ಯ ೭ ಎಂದು ನಿಗದಿಪಡಿಸಲಾಗಿದೆ.
ಈ ಲೆಕ್ಕಚಾರ ಅನುಸಾರ ಒಂದು ರಾಜ್ಯದ ಶಾಸಕನ ಮತಮೌಲ್ಯಕ್ಕೂ ಮತ್ತೊಂದು ರಾಜ್ಯದ ಶಾಸಕನ ಮತಮೌಲ್ಯಕ್ಕೂ ವ್ಯತ್ಯಾಸವಿದೆ. ಆದರೆ ಎಲ್ಲ ಸಂಸದರಿಗೆ ಒಂದೇ ಮತಮೌಲ್ಯ ನಿಗದಿ ಮಾಡಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಗೆ ಆಯ್ಕೆಯಾಗಿರುವ ಪ್ರತಿಸದಸ್ಯನ ಮತಮೌಲ್ಯ ೭೦೮ ಎಂದು ನಿರ್ಧರಿಸಲಾಗಿದೆ.