ರಾಷ್ಟ್ರಪತಿಗಳಾಗಿ ದ್ರೌಪದಿ ಮುರ್ಮು ಅಧಿಕಾರ ಸ್ವೀಕಾರ: ಬಿಜೆಪಿ ಕಾನೂನು ಪ್ರಕೋಷ್ಠದಿಂದ ಸಿಹಿ ಹಂಚಿ ಸಂಭ್ರಮ

ಕಲಬುರಗಿ,ಜು.25: ರಾಷ್ಟ್ರಪತಿಗಳಾಗಿ ದ್ರೌಪದಿ ಮುರ್ಮು ಅವರು ಅಧಿಕಾರ ಸ್ವೀಕರಿಸಿದ್ದರಿಂದ ಬಿಜೆಪಿ ಕಾನೂನು ಪ್ರಕೋಷ್ಠ ವಿಭಾಗದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೋಮವಾರ ನಗರದ ಜಿಲ್ಲಾ ನ್ಯಾಯಾಲಯದ ದ್ವಾರದ ಮುಂದೆ ಸಿಹಿ ಹಂಚಿ ಸಂಭ್ರಮಿಸಿದರು.
ಬಿಜೆಪಿ ಕಾನೂನು ವಿಭಾಗದ ಪ್ರಕೋಷ್ಠ ವಿಭಾಗದ ಸಂಚಾಲಕ ರಾಜಶೇಖರ್ ಬಿ.ಆರ್. ಡೊಂಗರಗಾಂವ್ ಅವರ ನೇತೃತ್ವದಲ್ಲಿ ನಡೆದ ಸಂಭ್ರಮದಲ್ಲಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಶ್ರೀಮತಿ ಆರತಿ ತಿವಾರಿ, ಮುಖಂಡರಾದ ಅಂಬಾರಾಯ್ ಪಟ್ಟಣ್, ಮಹಾಬಳೇಶ್ವರ್ ಮಲಕಪ್ಪಗೋಳ್, ಸಂಗಮೇಶ್ ದೊಡ್ಡಮನಿ, ಸಂಗೀತಾ, ಸ್ವಾಮಿ, ಶ್ರೀದೇವಿ ಕುರಿಕೋಟಾ, ರಾಜಶ್ರೀ, ಮಲ್ಲಿನಾಥ್ ಬಾಳಿ ಮುಂತಾದವರು ಪರಸ್ಪರರು ಸಿಹಿ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಜಶೇಖರ್ ಬಿ.ಆರ್. ಡೊಂಗರಗಾಂವ್ ಅವರು ಮಾತನಾಡಿ, ಭಾರತದ ಇತಿಹಾಸದಲ್ಲಿಯೇ ಅಚ್ಚಳಿಯದ ದಾಪುಗಾಲು ಹಾಕುತ್ತಿರುವ ಬಿಜೆಪಿ ಪಕ್ಷವು ಕೇವಲ ಬ್ರಾಹ್ಮಣ, ಲಿಂಗಾಯತ ಮುಂತಾದ ಕೆಲವೇ ಸಮುದಾಯಗಳ ಪಕ್ಷವಲ್ಲ. ಬದಲಾಗಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವಲ್ಲಿ ಅರ್ಥಪೂರ್ಣವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು.
ಜಗಜ್ಯೋತಿ ಬಸವೇಶ್ವರರು ಹೇಳಿದಂತೆ ಎಲ್ಲರೂ ಎಲ್ಲರಿಗಾಗಿ, ವರ್ಗ, ವರ್ಣ ರಹಿತ ಸಮಾಜ ನಿರ್ಮಾಣಕ್ಕೆ ಕರೆ ಕೊಟ್ಟಂತೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಜಾತಿ, ಮತ, ಪಂಥಗಳ ಬೇಧ, ಭಾವ, ಶ್ರೇಷ್ಠ, ಕನಿಷ್ಠ, ಬಡವ, ಬಲ್ಲಿದ ಎಂಬುದಕ್ಕೆ ಇತಿಶ್ರೀ ಹಾಡಲು ಆದಿವಾಸಿ ಜನಾಂಗದ ದ್ರೌಪದಿ ಮುರ್ಮು ಅವರಿಗೆ ಎನ್‍ಡಿಎ ಸರ್ಕಾರವು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದೆ ಎಂದು ಅವರು ಶ್ಲಾಘಿಸಿದರು.
ಕಾಂಗ್ರೆಸ್, ಆರ್‍ಜೆಡಿ ಮತ್ತು ಇತರೆ ರಾಜಕೀಯ ಪಕ್ಷಗಳ ಮುಖಂಡರಿಗೆ ದೇಶದ ಬಗ್ಗೆ ಚಿಂತೆಯಿಲ್ಲ. ತಾವು ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ರಾಜಕೀಯಕ್ಕೆ ತಂದು ಶಾಸಕ, ಸಂಸದರನ್ನಾಗಿ ಮಾಡಿ ಕಾಲಹರಣವೊಂದೇ ಗುರಿಯಾಗಿರಿಸಿಕೊಂಡಿದ್ದಾರೆ. ಇದರೊಂದಿಗೆ ಜಾತಿ ರಾಜಕಾರಣವೂ ಸಹ ಆಗಿದೆ. ಆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರ ಕುರಿತು ಅಪಪ್ರಚಾರ ಮಾಡಿದ್ದೇ ಸಾಕ್ಷಿ ಎಂದು ಅವರು ಟೀಕಿಸಿದರು.