ರಾಷ್ಟ್ರಧ್ವಜ ಹಾರಾಟಕ್ಕೆ ಬಿಜೆಪಿ ಕರೆ: ಗಿಮಿಕ್ ನ ಭಾಗ: ಸಿದ್ದು ಆರೋಪ

ಬೆಂಗಳೂರು,ಆ.5- ಹಿಟ್ಲರ್‍ ನ ಆದರ್ಶ ಎಂದು ಭಾವಿಸುವುದು ಬಿಟ್ಟು ನೈಜ ಪ್ರಜಾತಂತ್ರ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಾಗ ಮಾತ್ರ ರಾಷ್ಟ್ರ ಧ್ವಜ ಹಾರಿಸಿ ಎಂದು ಜನರಿಗೆ ಕರೆಕೊಡುವ ನೈತಿಕತೆ ಬರುತ್ತದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.ದೇಶದಾದ್ಯಂತ ರಾಷ್ಟ್ರ ಧ್ವಜಗಳನ್ನು ಹಾರಿಸುವ ಉತ್ಸವ ಆಚರಿಸಲು ಹೊರಟಿರುವ ಬಿಜೆಪಿ ಹಾಗೂ ಆರ್‍ಎಸ್‍ಎಸ್‍ ಗೆ ಯಾವ ನೈತಿಕತೆ ಇದೆ ಎಂದು ಗುಡುಗಿದ್ದಾರೆ.“ತ್ರಿವರ್ಣ ಧ್ವಜವು ಸ್ವಾತಂತ್ರ್ಯ, ಪ್ರಜಾತಂತ್ರ ಹಾಗೂ ಸತ್ಯಶೀಲತೆಗಳನ್ನು ಪ್ರತಿನಿಧಿಸುತ್ತದೆ. ಸಾವಿರಗಟ್ಟಲೆ ವರ್ಷಗಳಿಂದ ಈ ನೆಲದಲ್ಲಿ ಪರಂಪರಾಗತವಾಗಿ ಬಂದಿರುವ ಸುಂದರ ವಿಚಾರಗಳ ಲಾಂಛನವಾಗಿ ಧ್ವಜವನ್ನು ರೂಪಿಸಲಾಗಿದೆ” ಎನ್ನುವುದು ನೆಹರೂ ಅವರ ನಿಲುವಾಗಿತ್ತು ಇದೀಗ ಬಿಜೆಪಿ ರಾಜಕೀಯ ನಾಟಕಕ್ಕೆ ಬಳಸುತ್ತಿದೆ ಎಂದಿದ್ದಾರೆ.ಬಿಜೆಪಿ ಮತ್ತು ಆರ್‍ಎಸ್‍ಎಸ್‍ಗಳ ಇತಿಹಾಸ ಗೊತ್ತಿರುವವರಿಗೆ ಈ ಹೊಸ ವರಸೆ ಪ್ರಾಮಾಣಿಕವಾದುದಲ್ಲವೆಂದು ಗೊತ್ತಿದೆ. ಈ ಪವಿತ್ರವಾದ ನೆಲದಲ್ಲಿ ಯಾವುದು ಸಹಜವೂ ಗೌರವಯುತವೂ ಆದ ಸಂಗತಿಗಳಿವೆಯೊ ಅವುಗಳನ್ನೆಲ್ಲ ಹಾಳುಗೆಡವಿ ಕೇವಲ ಗಿಮಿಕ್ಕಿಗಾಗಿ ಬಳಸಿಕೊಳ್ಳುವುದು ಬಿಜೆಪಿ-ಆರ್‍ಎಸ್‍ಎಸ್‍ನ ದುಷ್ಟ ತಂತ್ರದ ಭಾಗ ಎಂದು ಕಿಡಿ ಕಾರಿದ್ದಾರೆ.ಆರ್‍ಎಸ್‍ಎಸ್ ತೀರಾ ಇತ್ತೀಚಿನವರೆಗೂ ನಾಗಪುರದ ತಮ್ಮ ಕಛೇರಿಯ ಮೇಲೆ ಧ್ವಜ ಹಾರಿಸಿರಲಿಲ್ಲ. ಬಲವಂತವಾಗಿ ಇಬ್ಬರು ಯುವಕರು ಅವರ ಕಛೇರಿಗೆ ನುಗ್ಗಿ ಧ್ವಜ ಹಾರಿಸಿದ ಮೇಲೆ ಆರ್‍ಎಸ್‍ಎಸ್ ಕೇಂದ್ರ ಕಛೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸಲು ಪ್ರಾರಂಭಿಸಿದರು ಎಂದು ಅವರು ತಿಳಿಸಿದ್ದಾರೆ.ಬೆಲೆ ಏರಿಕೆ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಜನರ ಗಮನ ದೂರ ಮಾಡಲು ‘ಹರ್ ಘರ್ ತಿರಂಗಾ’ ಎಂಬ ಘೋಷಣೆ ಪ್ರಾರಂಭಿಸಿದ್ದಾರೆ. ರೈತರು ತಯಾರಿಸಿದ ಹತ್ತಿ ಮತ್ತು ರೇಷ್ಮೆಯಲ್ಲಿ ಧ್ವಜವನ್ನು ಸಿದ್ಧಪಡಿಸಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರರು ಧ್ವಜ ರೂಪಿಸುವ ಚರ್ಚೆಯಲ್ಲಿ ನಿರ್ಣಯ ಅಂಗೀಕರಿಸಿದ್ದರು. ಮೋದಿ ಸರ್ಕಾರವು ಈಗ ಪಾಲಿಸ್ಟರ್ ಬಟ್ಟೆಯಲ್ಲಿ ಧ್ವಜಗಳನ್ನು ಮುದ್ರಿಸಿ ಹಂಚುತ್ತಿದೆ. ಇದು ಧ್ವಜದ ಪಾವಿತ್ರ್ಯದ ಮತ್ತು ಸ್ವದೇಶಿ ತತ್ವದ ಅವಮಾನವೂ ಆಗಿದೆ ಎಂದಿದ್ದಾರೆ.ಬಿಜೆಪಿ ಧ್ವಜದ ಆಕಾರವನ್ನೆ ವಿಕೃತಗೊಳಿಸಿರುವುದನ್ನು ಮಾಧ್ಯಮಗಳು ತೋರಿಸುತ್ತಿವೆ. ಚರಕದ ಮುಂದೆ ಕೂತು ಹಲವು ಬಾರಿ ಫೋಸು ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿಯವರ ಕಣ್ಣು ಯಾವುದರ ಮೇಲೆಲ್ಲ ಬೀಳುತ್ತದೊ ಅದು ಸಂಪೂರ್ಣ ಹಾಳಾಯಿತೆಂದೆ ಅರ್ಥ ಎಂದು ಲೇವಡಿ ಮಾಡಿದ್ದಾರೆ.