ರಾಷ್ಟ್ರಧ್ವಜ ಸಂಹಿತೆ ಪಾಲಿಸಲು ದಾನೇಶ್ ಕರೆ

ಕೋಲಾರ,ಜ.೧೩:ರಾಷ್ಟ್ರಧ್ವಜಾರೋಹಣ ಸಂದರ್ಭ ರಾಷ್ಟ್ರಧ್ವಜ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಭಾರತ ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ. ದಾನೇಶ್ ತಿಳಿಸಿದರು.
ತಾಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಏರ್ಪಡಿಸಿದ್ದ ರಾಷ್ಟ್ರಧ್ವಜ ಮಾಹಿತಿ ಶಿಬಿರ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿರುವ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಶಾಲೆಗಳು ಸಂಘ-ಸಂಸ್ಥೆಗಳು ರಾಷ್ಟ್ರಧ್ವಜ ಸಂಹಿತೆ ನಿಯಮಗಳನ್ನು ತಿಳಿದುಕೊಂಡು ಅದರ ಅನುಸಾರವೇ ಧ್ವಜಾರೋಹಣ ಮಾಡಬೇಕು ಹಾಗೂ ಇಳಿಸಬೇಕು ಈ ಬಗ್ಗೆ ಪ್ರತಿ ಶಾಲೆಯ ಮುಖ್ಯಸ್ಥರಿಗೆ ಮತ್ತು ಎಲ್ಲ ಇಲಾಖೆಗಳ ನೌಕರರಿಗೆ ಅಗತ್ಯ ಅರಿವು ಆಗಬೇಕು ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಬಿವಿ ಗಂಗಾಧರ್ ಮಾತನಾಡಿ, ದೇಶ ಪ್ರೇಮದ ಸಂಕೇತವಾಗಿರುವ ನಮ್ಮ ತ್ರಿವರ್ಣ ಧ್ವಜ ಹಲವು ವಿಶೇಷತೆಗಳಿಂದ ಕೂಡಿದೆ ಹಲವು ಸ್ವಾತಂತ್ರ್ಯ ಹೋರಾಟಗಾರರು ಮಹಾ ನಾಯಕರು ಸೇರಿ ನಮ್ಮ ರಾಷ್ಟ್ರಧ್ವಜಕ್ಕೆ ಸುಂದರ ರೂಪ ನೀಡಿದ್ದಾರೆ ಪ್ರತಿಯೊಬ್ಬ ಶಿಕ್ಷಕರು ರಾಷ್ಟ್ರಧ್ವಜದ ಮಾಹಿತಿ ಕಲ್ಪನೆ ಪಡೆಯಬೇಕು ಎಂದರು.
ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಮುಖ್ಯೋಪಾಧ್ಯಾಯ ಜಿ. ಶ್ರೀನಿವಾಸ್ ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಜನರ ಆದರ್ಶವೆಂದು ಪರಿಗಣಿಸಲಾಗಿದೆ.
ಏಕೆಂದರೆ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳು ಇಂದಿನ ಯುವಕರಿಗೆ ಸ್ಪೂರ್ತಿಯಾಗಿದೆ, ಅವರ ತತ್ವಾದರ್ಶಗಳನ್ನು ಜಾರಿಮಾಡುವ ಪ್ರಾಮಾಣಿಕ ಪ್ರಯತ್ನ ಎಲ್ಲರೂ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಗೋವಿಂದಪ್ಪ, ಕೃಷ್ಣಪ್ಪ, ಮುನಿಯಪ್ಪ, ಸೊಣ್ಣೇಗೌಡ, ಮಮತಾ ಉಪಸ್ಥಿತರಿದ್ದರು.