ರಾಷ್ಟ್ರಧ್ವಜ ನೀತಿ ಸಂಹಿತೆ ತಿದ್ದುಪಡಿ ದೇಶಕ್ಕೆ ಅಪಾಯ

ಧಾರವಾಡ,ಜು30: ಬಿಜೆಪಿಯವರ ರಾಷ್ಟ್ರಧ್ವಜವೇ ಬೇರೆ ಇದೆ. ಅವರ ರಾಷ್ಟ್ರ ಪರಿಕಲ್ಪನೆಯೇ ಬೇರೆ ಆಗಿದೆ. ಅದಕ್ಕಾಗಿಯೇ ರಾಷ್ಟ್ರ ಧ್ವಜವನ್ನು ಪಾಲಿಸ್ಟರ್ ಬಟ್ಟೆಯಲ್ಲಿಯೂ ತರೋಕೆ ತಿದ್ದುಪಡಿ ತಂದಿದ್ದಾರೆ ಎಂದು ಮಹಾನಗರ ಪಾಲಿಕೆ ಸದಸ್ಯ ಮಯೂರ ಮೋರೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ರಾಷ್ಟ್ರಧ್ವಜಕ್ಕೆ ತನ್ನದೇ ಆದ ಗೌರವ ಇದೆ. ನಮ್ಮ ರಾಷ್ಟ್ರಧ್ವಜಕ್ಕೆ ಮೌಲ್ಯ, ಘನತೆ ಇದೆ, ಇದು ನಮ್ಮ ಸ್ವಾಭಿಮಾನದ ಸಂಕೇತ. ಇದನ್ನ ಹೊರದೇಶದವರು ಸಿದ್ಧಪಡಿಸಬಾರದು ಎಂದರು.
ಮೇಡ್ ಇನ್ ಇಂಡಿಯಾ ಅಂತಾರೆ. ಆದ್ರೆ ಈಗ ಚೀನಾದಿಂದ ಧ್ವಜ ತರಿಸಲು ಹೊರಟಿದ್ದಾರೆ. ನಮ್ಮಲ್ಲಿಯೇ 4,500 ಖಾದಿ ಗ್ರಾಮೋದ್ಯೋಗ ಸಂಸ್ಥೆಗಳಿವೆ. ಮುಂಚಿತವಾಗಿಯೇ ಹೇಳಿದ್ದರೆ ರಾಷ್ಟ್ರಧ್ವಜ ತಯಾರಿಸುತ್ತಿದ್ದರು. ಈಗ ದಿಢೀರಾಗಿ ಹೇಳಿ ಕೋಟ್ಯಾಂತರ ಧ್ವಜ ಕೊಡಿ ಅಂದರೆ ಹೇಗೆ ಸಾಧ್ಯ ಎಂದು ತಿಳಿಸಿದರು.
ಮಾನಕ್ ಬ್ಯೂರೊದಿಂದ ಮಾನ್ಯತಾ ಪಡೆದ ಹುಬ್ಬಳ್ಳಿಯ ಬೆಂಗೇರಿಯ ರಾಷ್ಟ್ರಧ್ವಜ ತಯಾರಕ ಘಟಕವಾಗಿದ್ದು, ಇಂತಹ ತಯಾರಕ ಘಟಕವನ್ನ ಮುಚ್ಚಲು ಹೊರಟ ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ. ಕೂಡಲೇ ನೀತಿ ಸಂಹಿತೆ ತಿದ್ದುಪಡಿ ವಾಪಸ್ ಪಡೆಯಬೇಕು. ಯಾವುದೇ ಕಾರಣಕ್ಕೂ ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡಬಾರದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಜತ ಉಳ್ಳಾಗಡ್ಡಿ ಮಠ, ಪಾಲಿಕೆ ಸದಸ್ಯ ಕವಿತಾ ಕಬ್ಬೇರ ಭಾಗವಹಿಸಿದ್ದರು.