ಬೀದರಃಜು. 15: ನಾವೆಲ್ಲರೂ ಭಾರತೀಯರು, ರಾಷ್ಟ್ರೀಯತೆಯ ದಿವ್ಯ ಸಂದೇಶವನ್ನು ಸಮಸ್ತ ನಾಗರಿಕರಿಗೆ ಒಗ್ಗೂಡಿಸುವ ದೇಶದ ಸಮಗ್ರತೆಗಾಗಿ ಅಖಂಡತೆಗಾಗಿ, ಏಕತೆಗಾಗಿ, ರಾಷ್ಟ್ರದ ಹಿತ ಕಾಪಾಡಲು ಒಂದಾಗಬೇಕಾದಂತಹ ಅನಿವಾರ್ಯತೆ ಇದೆ ಎಂದು ರಾಷ್ಟ್ರೀಯ ಜಾಗರಣಾ ಸಮಿತಿ, ಹಿಂದೂ ಜಾಗರಣಾ ಸಮಿತಿಯ ಮುಖಂಡರಾದ ಬಿ.ಜಿ. ಶೆಟಕಾರ ಅವರು ಕರೆ ನೀಡಿದರು.
ಬೀದರ ನಗರದ ಸಾಯಿ ಪುಷ್ಪಾಂಜಲಿ ಸಾಂಸ್ಕøತಿಕ ಕಲ್ಯಾಣ ಮಂಟಪದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತಿದ್ದರು. ಬಹುಸಂಖ್ಯಾತ ಲಿಂಗಾಯತರು, ಲಿಂಗಾಯತದ ಒಳಪಂಗಡದ ಸಮುದಾಯದವರು ಸೇರಿದಂತೆ ಸರ್ವ ಹಿಂದುಗಳ ಜಾಗರಣಾ ಕಾರ್ಯಕ್ರಮ 16-7-2023 ರಂದು ಸಂಜೆ 4-00 ಗಂಟೆಗೆ ಬೀದರ ನಗರದ ನೆಹರು ಸ್ಟೇಡಿಯಂ ಬಳಿಯಿರುವ ಸಾಯಿ ಪುಷ್ಪಾಂಜಲಿ ಸಾಂಸ್ಕøತಿಕ ಮಂಟಪದಲ್ಲಿ ಏರ್ಪಡಿಸಲಾಗಿದ್ದು, ಮೆಹಕರ್ ತಡೋಳಾ ಆಶ್ರಮದ ಶ್ರೀ ಷ.ಬ್ರ. ರಾಜೇಶ್ವರ ಶಿವಾಚಾರ್ಯರು ಆಗಮಿಸಿ ರಾಷ್ಟ್ರೀಯತೆ, ಧಾರ್ಮಿಕ ಹಾಗೂ ಭಾರತೀಯತೆ ಬಗ್ಗೆ, ಉದ್ಭೋದನೆ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.
ಪ್ರಮುಖರಾದ ಸೋಮಶೇಖರ ಅಣ್ಣೆಪ್ಪ ಪಾಟೀಲ ಗಾದಗಿಯವರು ಮಾತನಾಡಿ, ಈ ಕಾರ್ಯಕ್ರಮದಲ್ಲಿ ಭಾರತ ರಾಷ್ಟ್ರದ ಪ್ರಸ್ತುತ ಜ್ವಲಂತ ಸಮಸ್ಯೆಗಳು ಕ್ಲೀಷ್ಟಕರ ಪರಿಸ್ಥಿತಿ ಸೇರಿದಂತೆ ಹಿಂದುಗಳ ಹಿತ ಕಾಪಾಡುವ ವಿಷಯ ಸೇರಿದಂತೆ ಇತರೆ ಮಹತ್ವದ ವಿಷಯ ಕುರಿತು ಪೂಜ್ಯ ಸ್ವಾಮಿಜಿಗಳು ಸಂದೇಶ ನೀಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೀದರ ಜಿಲ್ಲೆಯ ಹಿಂದು ಸಮಾಜಗಳ, ವೀರಶೈವ ಲಿಂಗಾಯತ, ಲಿಂಗಾಯತ, ಮತ್ತು ಒಳಪಂಗಡಗಳ ಸಮಸ್ತ ಮಹಾನಾಗರಿಕರಲ್ಲಿ ಪಾಟೀಲರು ಮನವಿ ಮಾಡಿದರು.
ಸಮಿತಿಯ ಅಧ್ಯಕ್ಷ ಶಂಕರೆಪ್ಪ ಪಾಟೀಲ ಮಾತನಾಡಿ, ರಾಷ್ಟದ್ರ ಹಿತಕ್ಕಾಗಿ ನಾವೆಲ್ಲರೂ ಒಂದಾಗಬೇಕಾಗಿದೆ. ಸರ್ವ ಜನತೆ, ಯುವಕರು, ಯುವತಿಯರು, ಮಹಿಳೆಯರು, ಸಮಾಜ ಚಿಂತಕರು, ಪಾಲ್ಗೊಳ್ಳಬೇಕೆಂದವರು ಮನವಿ ಮಾಡಿದರು.
ರಾಮ ಅಂಬೂರೆ ಮತ್ತು ರಾಜಕುಮಾರ ಬಿಜ್ಜಾ ಅವರುಗಳು ಮಾತನಾಡಿ ಹಿಂದು ಪರವಾಗಿರುವಂತಹ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಈ ಕುರಿತು ಹೆಚ್ಚಿನ ಪ್ರಚಾರ ನಡೆಸಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದು ಜನ ಸೇರುವಂತೆ ಶ್ರಮಿಸಬೇಕೆಂದು ಕೊರಿದರು.
ಡಾ. ಸತೀಶ ಪಾಟೀಲರು ಮಾತನಾಡಿ, ಹಿಂದು ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ಸೇರಿಸಿ ಸರ್ಕಾರದ ಬೊಕ್ಕಸಕ್ಕೆ ಹಣ ತುಂಬಿಸಿಕೊಳ್ಳುತಿದ್ದು, ಆ ಹಣ ಬೇರೆ ವರ್ಗದ ಜನತೆಯಗೋಸ್ಕರ ಖರ್ಚು ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದವರು ವಿಷಾದ ವ್ಯಕ್ತಪಡಿಸಿದರು.
ಏಕರೂಪದ ಸಮಾನತೆಯ ಕಾನೂನು ಜಾರಿಗೆ ತರುವ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಮೂಲಕ ಒತ್ತಾಯಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಂತೇಶ್ವರ ಶೆಟಕಾರ, ಬಸವರಾಜ ಸ್ವಾಮಿ ಹೆಡಗಾಪುರ, ವಿಕ್ರಮ ಮುದಾಳೆ, ಉಪಸ್ಥಿತರಿದ್ದರು.