ರಾಷ್ಟ್ರದ ಹಿತಕ್ಕಾಗಿ ತರುಣರನ್ನು ಸಂಘಟಿಸಿ

ಅರಸೀಕೆರೆ,ಅ. ೩೦- ಡಾ.ಕೇಶವ ಬಲಿರಾಮ ಹೆಡಗೇವಾರ್ ಅವರು ತಮ್ಮ ಜೀವನವನ್ನು ಸಮಾಜಕ್ಕೆ ಅರ್ಪಣೆ ಮಾಡಿಕೊಳ್ಳುವ ಮೂಲಕ ರಾಷ್ಟ್ರದ ಹಿತಕ್ಕಾಗಿ ತರುಣರನ್ನು ಸಂಘಟಿಸಿ ಅವರಲ್ಲಿ ದೇಶಭಕ್ತಿ ಸಂಸ್ಕಾರ ತರಬೇತಿ ನೀಡುವ ಮೂಲಕ ಸಂಘ ಪ್ರಾರಂಭಿಸಿದರು ಎಂದು ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಿನರಸಿಂಹಶಾಸ್ತ್ರಿ ತಿಳಿಸಿದರು.
ನಗರದ ಸಾರ್ವಜನಿಕ ಗ್ರಂಥಾಲಯ ರಸ್ತೆಯಲ್ಲಿರುವ ಸೀತಾರಾಮ ಮಂದಿರದಲ್ಲಿ ಏರ್ಪಡಿಸಿದ್ದ ಹಿರಿಯರ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರಂಭಗೊಂಡು ೯೫ ವರ್ಷ ಪೂರೈಸಿದ್ದು, ಈ ಸುದೀರ್ಘ ಅವಧಿಯಲ್ಲಿ ಸಂಘದ ಶಕ್ತಿಯು ವಿಶ್ವವ್ಯಾಪಿ ಹರಡಿದೆ ಎಂದರು.
ದೇಶದ ಸಮಗ್ರ ಅಭಿವೃದ್ಧಿಗೆ ಮಾರಕವಾಗಿರುವ ಮತಾಂತರ ಲವ್ ಜಿಹಾದ್, ಗೋ ಹತ್ಯೆ ಪ್ರಕರಣ ನಡೆಯುತ್ತಲೇ ಇದ್ದು ಈ ಪಿಡುಗನ್ನು ಬುಡಸಮೇತ ಕಿತ್ತು ಹಾಕಲು ಸಮಗ್ರ ಹಿಂದೂ ಸಮಾಜ ಸನ್ನದ್ಧವಾಗಿ ಹೋರಾಡಬೇಕಾಗಿದೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಯಾವ ಧರ್ಮ, ಜನಾಂಗವನ್ನು ದ್ವೇಷಿಸುವುದಿಲ್ಲ. ದೇಶದಲ್ಲಿ ೫೮ ಸಾವಿರ ಶಾಖೆಗಳನ್ನು ಹೊಂದಿದ್ದು, ಆಲದ ಮರದಂತೆ ವಿಶ್ವವ್ಯಾಪಿ ೨ ಲಕ್ಷ ಸೇವಾ ಚಟುವಟಿಕೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿಯದರ್ಶಿನಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅನಂತರಾಮಯ್ಯ ವಹಿಸಿದ್ದರು. ಸಂಘಟನೆ ಮುಖ್ಯಸ್ಥ ಕೆ.ಎನ್. ಸತ್ಯನಾರಾಯಣ, ಮುಖ್ಯ ಶಿಕ್ಷಕ ಮಹಾಲಿಂಗಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಡಿ. ಪ್ರಸಾದ್, ವೆಂಕಟೇಶ್, ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀಕಾಂತ್, ಗೋವಿಂದೇಗೌಡ ಮತ್ತಿತರರು ಉಪಸ್ಥಿತರಿದ್ದರು.