ರಾಷ್ಟ್ರದ ಸೇವೆಗೆ ಸೇವಾ ಮನೋಭಾವ ಅಗತ್ಯ

ರಾಯಚೂರು,ಜು.೧೩-
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಮೀಕ್ಷೆಗಳು ಪ್ರಮುಖ ಪಾತ್ರವಹಿಸುತ್ತದೆ ವೈಜ್ಞಾನಿಕವಾಗಿ ನೀತಿರೂಪಣೆಗೆ ದತ್ತಾಂಶಗಳ ಅವಶ್ಯಕತೆ ಬಹಳ ಮುಖ್ಯ, ಯುವಕರು ಶಿಕ್ಷಣದಿಂದ ಹೊರಉಳಿಯುವಿಕೆ ಹೆಚ್ಚಾಗುವುದಕ್ಕೆ ಕಾರಣಗಳೇನು ಮತ್ತು ಪರಿಣಾಮಗಳು ಎಂಬ ಸಮೀಕ್ಷೆ ಇದಾಗಿದ್ದು, ಶಿಕ್ಷಣವನ್ನು ಸರಿಯಾಗಿ ಪಡೆಯದೇ ಹೋದಲ್ಲಿ ಆಗುವ ಪರಿಣಾಮಗಳ ಸಮೀಕ್ಷೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಅವರು ಹೇಳಿದರು.
ರಾಯಚೂರು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ’ಔಪಚಾರಿಕ ಶಿಕ್ಷಣ ಹಾಗೂ ನಿಯಮಿತ ಉದ್ಯೋಗದಲ್ಲಿಲ್ಲದ ಯುವಕರ ಸಮೀಕ್ಷೆ ಕುರಿತು ಎನ್‌ಎಸ್‌ಎಸ್ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರಿಗೆ ಶಿಕ್ಷಣ ಸರಿಯಾದ ರೀತಿಯಲ್ಲಿ ಸಿಗದೆ ಇದ್ದಾಗ ಯಾವ ಪರಿಣಾಮ ಅವರ ಮೇಲೆ ಬೀಳುತ್ತೆ ಅನ್ನುವುದು ಸಮೀಕ್ಷೆಯಿಂದ ತಿಳಿಯುವುದಾಗಿದೆ. ಶಿಕ್ಷಣ ಇಲ್ಲದ ಕಡಿಮೆ ಆದಾಯ ಇರುವವರಿಗೆ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸುಧಾರಿಸುವುದು ಮತ್ತು ನಾಗರಿಕ ಸಮಾಜವನ್ನು ಬದಲಾಯಿಸಲು ಸ್ವಯಂ ಪ್ರೇರಿತನಾಗಿ ಮನೋಭಾವದಿಂದ ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾವಿವಿಯ ಉಪಕುಲಸಚಿವರು ಮತ್ತು ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಜಿ.ಎಸ್.ಬಿರಾದಾರ್ ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಭಾರತ ಸರ್ಕಾರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಕೇಂದ್ರ ವಲಯ ಯೋಜನೆಯಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸುಧಾರಿಸುವುದು ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು, ದತ್ತು ಪಡೆದ ಹಳ್ಳಿಗಳಲ್ಲಿ ಮಾತ್ರ ಸಮೀಕ್ಷೆ ಮಾಡಬೇಕು ರಾಷ್ಟ್ರೀಯ ಸೇವಾ ಯೋಜನೆಯ ತರಬೇತಿಯ ಉದ್ದೇಶ ಹಾಗೂ ಸ್ವಯಂ ಸೇವಕರ ಕರ್ತವ್ಯದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಿರವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಲಕ್ಷ್ಮಣ ಯಾದವ ಅವರು ಸಮೀಕ್ಷೆ ವಿಷಯವಸ್ತು ಆಯ್ಕೆಗಳು, ಪ್ರಶ್ನಾವಳಿ ಕುರಿತು ಸವಿಸ್ತಾರವಾಗಿ ವಿವರಿಸುವುದರೊಂದಿಗೆ ತರಬೇತುದಾರರಿಗೆ ವಿಶೇಷ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ರಾವಿವಿಯ ವಿದ್ಯಾವಿಷಯಕ ಪರಿಷತ್ ಸದಸ್ಯ ಕಿಶನ್ ರಾಠೋಡ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಎನ್‌ಎಸ್‌ಎಸ್ ಕಾರ್ಯಕ್ರಮದ ಅಧಿಕಾರಿಗಳು, ಕಾಲೇಜು ಪ್ರಾಚಾರ್ಯರು, ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ಅತಿಥಿ ಉಪನ್ಯಾಸಕ ಕೃಷ್ಣ ಪ್ರಾರ್ಥಿಸಿದರು, ರಾಷ್ಟ್ರೀಯ ಸೇವಾ ಯೋಜನೆ ಮಹಿಳಾ ಘಟಕದ ಪ್ರತಿನಿಧಿ ಡಾ.ಪದ್ಮಜಾ ದೇಸಾಯಿ ಅವರು ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಪುರುಷ ಘಟಕದ ಪ್ರತಿನಿಧಿ ಬಜಾರಪ್ಪ ಅವರು ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಅತಿಥಿ ಉಪನ್ಯಾಸಕ ಅನಿಲ್ ಅಪ್ರಾಳ್ ವಂದಿಸಿದರು.